ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಜನರು ಮಳೆಗಾಲದ  ಸಮಯದಲ್ಲಿ ನಡೆದುಕೊಂಡೂ ಓಡಾಡಲು ಸಹ ಅತೀವವಾದ ಸಮಸ್ಯೆಯನ್ನು ಹೊಂದಿರುವ ಸ್ಥಿತಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೇರುಕೊಡಿಗೆ ರಸ್ತೆ ತಲುಪಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನ ನುಗ್ಗಿ ಹಾಗೂ ಬಿಂತ್ರವಳ್ಳಿ ಗ್ರಾಮದ ನಡುವಿನ ರಸ್ತೆಯಾದ ಬೇರುಕೊಡಿಗೆ ರಸ್ತೆಯು ಹಾಳಾಗಿದ್ದು ಈ ದಾರಿಯಲ್ಲಿ ತುರ್ತು ಸಂದರ್ಭಗಳಲ್ಲಿ ವಾಹನ ಹೋಗಲು, ಸ್ಥಳೀಯರಿಗೆ ನಡೆದಾಡಲು ಸಹ ಆಗದೆ ಇರುವ ಹಂತಕ್ಕೆ ತಲುಪಿದೆ ಎಂದು ಸ್ಥಳೀಯರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. ಕುದುರೆಗುಂಡಿ ಶಾಲೆ, ಈಶ್ವರ ದೇವಸ್ಥಾನಕ್ಕೆ ಈ ರಸ್ತೆಯು ಮಾರ್ಗವನ್ನು ಕಲ್ಪಿಸುತ್ತದೆ, ಆದರೆ ಅತ್ಯಾವಶ್ಯಕವಾಗಿರುವ ಈ ರಸ್ತೆ ದುರಸ್ತಿ ಮಾಡಿಕೊಡದೇ ಇರುವುದು ಜನರಗೋಳಾಗಿದೆ. 

ಪ್ರತೀ ವರ್ಷವೂ ಇಲ್ಲಿನ ಗ್ರಾಮಸ್ಥರೇ ಈ ರಸ್ತೆಯನ್ನು ದುರಸ್ಥಿ ಗೊಳಿಸುತ್ತಾರೆ, ನಡೆದು ಅಥವಾ ವಾಹನಗಳಲ್ಲಿ ಓಡಾಡಲು ಸಮರ್ಪಕವಾದ ರಸ್ತೆಯಿಲ್ಲ, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಂದ ಕೇವಲ ಆಶ್ವಾಸನೆ ದೊರೆತಿದೆಯೇ ಹೊರತು ಯಾವುದೇ ಕೆಲಸಗಳಾಗಿಲ್ಲ, ಇನ್ನಾದರೂ ಇತ್ತ ಗಮನಹರಿಸಿ ಸೂಕ್ತ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿ - ಫೆಲಿಕ್ಸ್,  ಸ್ಥಳೀಯರು    

ಹಾಳಾಗಿರುವ ಬೇರುಕೊಡಿಗೆ ರಸ್ತೆಯು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬಂದರೂ ಕೂಡ ಸಂಬಂಧಿಸಿದವರಿಂದ ಯಾವುದೇ ಪ್ರಯೋಜನಗಳಾಗಿಲ್ಲ ಅಧಿಕಾರಿಗಳು, ಶಾಸಕರು ಆಶ್ವಾಸನೆ ನೀಡಿ ಹೋಗುತ್ತಾರೆ ಆದರೆ ಯಾರಿಂದಲೂ ಈ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಲ್ಲ, ಈ ಮಾರ್ಗದಲ್ಲಿ ಓಡಾಡುವ 50 ಕ್ಕೂ ಅಧಿಕ ಕುಟುಂಬಗಳು ಮಳೆಗಾಲದಲ್ಲಿ ತೀವ್ರತರಹದ ಸಮಸ್ಯೆಯನ್ನು ಎದುರಿಸುವಂತಾಗಿದೆ, ಗ್ರಾಮಸ್ಥರೇ ರಸ್ತೆಯನ್ನು ದುರಸ್ಥಿಗೊಳಿಸುತ್ತಾರೆ ಆದರೆ ಸಂಬಂಧಿಸಿದವರು ಇತ್ತ ಮುಖಮಾಡಿಯೂ ನೋಡುತ್ತಿಲ್ಲ ಎಂದು ತಮಗಾಗುತ್ತಿರುವ ಸಮಸ್ಯೆಯ ಕುರಿತು ಸ್ಥಳೀಯರು ಅಳಲು ತೋಡಿಕೊಂಡರು. 

ನಾಲ್ಕು ಕಿ.ಮೀ ಇರುವ ಈ ರಸ್ತೆಯ 1 ಕಿ.ಮೀ ವ್ಯಾಪ್ತಿಯನ್ನು ಕಳೆದ ಬಾರಿ ಶಾಸಕ ಟಿ.ಡಿ ರಾಜೇಗೌಡ ಅವರು ದುರಸ್ಥಿಗೊಳಿಸಿ ನೀಡಿದ್ದಾರೆ ಎನ್ನಲಾಗಿದ್ದು, ಇನ್ನುಳಿದ ಮೂರು ಕಿ.ಮೀ ರಸ್ತೆ ದುರಸ್ಥಿಗೊಂಡಲ್ಲಿ ಇಲ್ಲಿನ ಸ್ಥಳೀಯರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಅನಾರೋಗ್ಯದ ಸಂದರ್ಭದಲ್ಲಿ ಓಡಾಡುವ ರೋಗಿಗಳಿಗೆ ಅನುಕೂಲವಾಗಲಿದೆ.