ಬಾಳೆಹೊನ್ನೂರು/ಜಯಪುರ : (ನ್ಯೂಸ್ ಮಲ್ನಾಡ್ ವರದಿ)  ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಆಂಬುಲೆನ್ಸ್ ನಲ್ಲೇ ಹೆರಿಗೆ ಆಗಿರುವ ಘಟನೆ ಬಾಳೆಹೊನ್ನೂರು ಜಯಪುರ ಮಾರ್ಗ ಮಧ್ಯದಲ್ಲಿ ಬರುವ ಶಾಂತಿಗ್ರಾಮ ದಲ್ಲಿ ನಡೆದಿದೆ.

ನೆನ್ನೆ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಬಾಳೆಹೊನ್ನೂರಿನ ಕಾರ್ಮಿಕ ಕುಟುಂಬದ ತುಂಬು ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಕೊಪ್ಪ ಆಸ್ಪತ್ರೆಗೆ ಹೊರಟಿದ್ದಾರೆ.

ಇದನ್ನೂ ಓದಿ : ಶೃಂಗೇರಿ : ಕೆರೆಕಟ್ಟೆ ಮಾರ್ಗದಲ್ಲಿ ಲಾರಿ ಹಾಗೂ ಕಾರ್ ನಡುವೆ ರಸ್ತೆ ಅಪಘಾತ


ಆದರೆ ಮಾರ್ಗಮಧ್ಯದಲ್ಲಿ ಅತಿಯಾದ ನೋವು ಕಾಣಿಸಿಕೊಂಡ ಕಾರಣ ಆಂಬುಲೆನ್ಸ್ ಸಿಬ್ಬಂದಿ ಮಹಿಳೆಗೆ ಉಪಚರಿಸಿ ಸಿಬ್ಬಂದಿ ಅಶ್ವಿನ್ ಅವರು ಆಂಬ್ಯುಲೆನ್ಸ್ ನಲ್ಲೇ ಹೆರಿಗೆ ಆಗಲು ನೆರವು ನೀಡಿದ್ದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಧರ್ಭ ವಾಹನ ಚಾಲಕ ಮನ್ಸೂರ್ ಸಹ ಸಹಕರಿಸಿದ್ದಾರೆ. ಸಧ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದು ಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ರಾಜಕಾರಣಿಗಳ ಹೆಂಡತಿ ಮಕ್ಕಳ ಹೆರಿಗೆ ಏಕೆ ಮಧ್ಯ ರಸ್ತೆಯಲ್ಲಿ ಆಗುವುದಿಲ್ಲ?, ಜನರ ಪ್ರಶ್ನೆ

ಬಡವರ ಮನೆಯ ಮಕ್ಕಳು ರಸ್ತೆಯಲ್ಲಿ ಹುಟ್ಟುತ್ತಾರೆ, ಅದೆ ರಾಜಕಾರಣಿಗಳ ಹೆಂಡತಿ ಮಕ್ಕಳ ಡೆಲಿವರಿ ಏಕೆ ರಸ್ತೆಯಲ್ಲಿ ಆಗದೆ ದೂರದ ಊರಿನ ಪ್ರತಿಷ್ಠಿತ  ಆಸ್ಪತ್ರೆಗಳಲ್ಲಿ ಆಗುತ್ತದೆ, ನೀವೇಕೆ ಯಾವುದೇ ಚಿಕಿತ್ಸೆಗೆ ಬೆಂಗಳೂರು, ಶಿವಮೊಗ್ಗ, ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತೀರಾ, ನಮ್ಮ ಊರುಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಲು ನಿಮಗೇಕೆ ಇಚ್ಛಾಶಕ್ತಿ ಇಲ್ಲವಾಗಿದೆ. ನಿಮ್ಮ ಬಣ್ಣದ ಮಾತುಗಳನ್ನು ನಂಬುವ ನಮ್ಮ ಜನರ ಪರಿಸ್ಥಿತಿ ಏಕೆ ಹೀಗಿದೆ ಎಂದು ಜನರು ಪ್ರಶ್ನಿಸಿದ್ದಾರೆ.

ಮಲೆನಾಡಿನ ಭಾಗದಲ್ಲಿ ಅದರಲ್ಲೂ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ, ಮೂಡಿಗೆರೆ ಭಾಗದಲ್ಲಿ ಆಗಾಗ್ಗೆ ಈತರಹದ ಘಟನೆಗಳು ಸಂಭವಿಸುತ್ತಿರುತ್ತದೆ. ಹೆಚ್ಚಿನ ಬಡವರು, ಮಧ್ಯಮ ವರ್ಗದವರು ವಾಸಿಸುವ ಕಾರಣ ದೂರದ ಸುಸಜ್ಜಿತ ಆಸ್ಪತ್ರೆಗಳಿಗೆ ತೆರಳಲು ಆರ್ಥಿಕ ಅನಾನುಕೂಲತೆ ಕಾರಣದಿಂದ ಸಾಧ್ಯವಾಗುವುದಿಲ್ಲ, ಇನ್ನು ಈ ಭಾಗದಲ್ಲಿ ಒಂದೇ ಒಂದು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇರುವುದಿಲ್ಲ. ಈ ಬಗ್ಗೆ ಶೃಂಗೇರಿ, ಬಾಳೆಹೊನ್ನೂರು, ಕಳಸ, ಮೂಡಿಗೆರೆಯಲ್ಲಿ ಹಲವು ಪ್ರತಿಭಟನೆಗಳು ಸಹ ನಡೆದಿವೆ, ಆದರೆ ಮೋರಿ, ಸೇತುವೆ, ರಸ್ತೆ, ಹಕ್ಕುಪತ್ರ, ಸಬ್ಸಿಡಿ ಪೈಪ್ ಗಳ ಹೆಸರಿನಲ್ಲಿ ಚಿಲ್ಲರೆ ರಾಜಕಾರಣ ಮಾಡುವ ನೈಜ ಜನಪರ ಕಾಳಜಿ ಇಲ್ಲದ ರಾಜಕಾರಣಿಗಳಿಂದಾಗಿ ಜನರ ಬದುಕು ದುಸ್ತರವಾಗಿದೆ. ಈ ಬಗ್ಗೆ ಸಾರ್ವಜನಿಕರು ಸಹ ಆಗಾಗ್ಗೆ ಆಕ್ರೋಶ ಹೊರಹಾಕುತ್ತರಾದರೂ ವ್ಯರ್ಥ ಪ್ರಲಾಪವಾಗಿದೆ.