ವಿರಾಜಪೇಟೆ : (ನ್ಯೂಸ್ ಮಲ್ನಾಡ್ ವರದಿ) ಕೊಡಗಿನ ವಿರಾಜಪೇಟೆ ನಗರದಲ್ಲಿ ಹಾಡಹಗಲೆ ವೃದ್ಧೆಯೊಬ್ಬರ ಚಿನ್ನದ ಸರ ಕದಿಯಲು ಖದೀಮ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.


ವಿರಾಜಪೇಟೆ ನಗರದಲ್ಲಿ ಈ ಘಟನೆ ಸಂಭವಿಸಿದ್ದು ಇಲ್ಲಿನ ಕಕ್ಕಟ್ಟೆ ಗ್ರಾಮದ ಕಾವೇರಮ್ಮ(65) ಅವರು ಕಳ್ಳನ ದಾಳಿಗೆ ಒಳಗಾದ ವೃದ್ದೆ. ನಗರದ ಆಸ್ಪತ್ರೆಗೆ ತೆರಳುವ ದಾರಿಯಲ್ಲಿ ಔಷಧ ಕೇಂದ್ರದ ಬಳಿ ಔಷಧಿ ಖರೀದಿಗಾಗಿ ನಿಂತಿದ್ದ ವೇಳೆಯಲ್ಲಿ ಬುರ್ಖಾ ಧರಿಸಿ ಬಂದ ಕಳ್ಳ, ಕಣ್ಣಿಗೆ ಖಾರದ ಪುಡಿ ಎರಚಿ ವೃದ್ಧೆಯ ಕತ್ತಿನಲ್ಲಿರುವ ಚಿನ್ನದ ಸರವನ್ನು ಅಪಹರಿಸಲು ಯತ್ನಿಸಿದ್ದಾನೆ. ವೃದ್ದೆ ಕಾವೇರಮ್ಮ ಅವರು ತನ್ನ ಕೈಯಲ್ಲಿದ್ದ ಕೊಡೆಯಿಂದ ಅಪಹರಣ ಮಾಡುವ ವ್ಯಕ್ತಿಯ ಮೇಲೆ ಪ್ರಹಾರ ಮಾಡಲು ಮುಂದಾಗಿ, ಕಣ್ಣಿಗೆ ಖಾರದ ಹುಡಿ ಹಾಕಿರುವುದರಿಂದ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕ್ಷಣ ಮಾತ್ರದಲ್ಲಿ ದಾಳಿ ನಡೆಸಿದ ಕಳ್ಳನು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. 


ಘಟನೆಯ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಾವೇರಮ್ಮ ಅವರು ದೂರು ದಾಖಲಿಸಿದ್ದು ಅಪರಿಚಿತ ವ್ಯಕ್ತಿಯೋರ್ವ ಬುರ್ಕಾ ಧರಿಸಿಕೊಂಡು ತನ್ನ ಮೇಲೆ ಖಾರದ ಪುಡಿ ಎರಚಿ ಸರವನ್ನು ಅಪಹರಿಸಲು ಯತ್ನ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.