ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಹತ್ತಕ್ಕೂ ಅಧಿಕ ವರ್ಷಗಳಿಂದ ಸಮರ್ಪಕವಾದ ರಸ್ತೆಯನ್ನು ಕಾಣದೇ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ನಡೆಯ ಮೇಲೆ ಬೇಸತ್ತು, ಆಕ್ರೋಶ ಭರಿತರಾದ ಜನರು ಮುಂಬರುವ ದಿನಗಳಲ್ಲಿ ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ : ಜಯಪುರ : ಭಾರೀ ಮಳೆಗೆ ಬೆಳೆಹಾನಿಯಾದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕೃಷಿಕ
ಮಲೆನಾಡಿನಲ್ಲಿ ಒಂದೆಡೆ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ ಇನ್ನೊಂದೆಡೆ ಮೂಲಭೂತ ಸೌಕರ್ಯವಾದ ರಸ್ತೆಗಾಗಿ ಜನರು ಅಧಿಕಾರಿಗಳನ್ನು ಅಂಗಲಾಚಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಾಲುಕೊಪ್ಪ ಮೇಲಿನಕೊಡಿಗೆ, ಗೀಕಲ್ ಕಟ್ಟೆ ಭಾಗವನ್ನು ಸಂಪರ್ಕಿಸುವ ರಸ್ತೆಯ ಮೇಲೆಯೇ ಚರಂಡಿಯ ನೀರು ಹರಿದು ಭಾರೀ ಗಾತ್ರದ ಗುಂಡಿಗಳಾಗಿ, ನಡೆದುಕೊಂಡು ಹಾಗೂ ವಾಹನಗಳಲ್ಲಿ ಓಡಾಡಲು ಸಮಸ್ಯೆ ಎದುರಾಗಿದೆ, ಇಲ್ಲಿನ ನಲವತ್ತಕ್ಕೂ ಅಧಿಕ ಕುಟುಂಬಗಳ ಜನರು ಆಸ್ಪತ್ರೆಗೆ ತೆರಳಲು, ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳಲು ಪ್ರತಿನಿತ್ಯ ಆತಂಕದಲ್ಲಿ ಒಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಸಮಸ್ಯೆಗೆ ಸೂಕ್ತವಾದ ಸ್ಪಂದನೆ ಹಾಗೂ ಪರಿಹಾರ ಇನ್ನೂ ಲಭಿಸದೇ ಇರುವುದು ಸ್ಥಳೀಯರ ಗೋಳಾಗಿದೆ.
ರಸ್ತೆ ದುರಸ್ಥಿಕಾರ್ಯ ಮಾಡಿಕೊಡುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರಿಗೆ, ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು ಸಮಸ್ಯೆಯ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ :
ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳ ನಡೆಗೆ ಬೇಸತ್ತಿರುವ ಜನರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು 10ಕ್ಕೂ ಅಧಿಕ ವರ್ಷದಿಂದ ಎದುರಾಗಿರುವ ಸಮಸ್ಯೆಗೆ ಪರಿಹಾರ ದೊರಕುವವರೆಗೂ ಹೋರಾಟ ನಡೆಸುವ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಭಾಗದಲ್ಲಿ ನಿರ್ಮಾಣ ಮಾಡಿರುವ ಸಣ್ಣ ಮೋರಿಯಿಂದ ನೀರು ರಸ್ತೆ ಹಾಗೂ ಮನೆಗಳ ಸಮೀಪ ಹರಿಯುತ್ತಿದ್ದು ಕೆಲ ಮನೆಗಳು ಹಾನಿಯಾಗುವ ಸ್ಥಿತಿಗೆ ತಲುಪಿದೆ ಆದರೂ ಈ ಕುರಿತಾಗಿ ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ.



.jpeg)


0 Comments