ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನದ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.

ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಮೇಗಲಕೇರಿಯ ಮಂಜುನಾಥ (54) ಎಂದು ಗುರುತಿಸಲಾಗಿದ್ದು, ಮಂಜುನಾಥ್ ಅವರು ಗದ್ದೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಎಲ್ಲಾ ಏರ್ಪಾಟು ನಡೆಸಿದ ವೇಳೆ ಗಂಭೀರಗಾಯಗಳಿಗೆ ತುತ್ತಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ.


ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ :

ಘಟನೆಯನ್ನು ಖಂಡಿಸಿದ ಸ್ಥಳೀಯರು ಕಾಡಾನೆ ದಾಳಿಯಿಂದ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ರಸ್ತೆತಡೆ ನಡೆಸಿ, ತಮ್ಮೊಳಗಿದ್ದ ಆಕ್ರೋಶ ಹೊರಹಾಕಿದರು. ಆನೆ ದಾಳಿಗೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದರು. 

ಕಾಡಾನೆ ದಾಳಿಯಿಂದಾಗಿ ಮೃತಪಟ್ಟ ಮಂಜುನಾಥ ಅವರ ಮನೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಡಿ ಸಿ ಸಣ್ಣಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಕಾಡಾನೆ ದಾಳಿಗೆ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 75 ಮಂದಿ ಮೃತಪಟ್ಟಿದ್ದಾರೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಮು‌ಂದಾಗುತ್ತಿಲ್ಲ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದರು.

ಎರಡು ದಿನಗಳ ಹಿಂದಷ್ಟೇ  ಕಾಡಾನೆ ದಾಳಿಗೆ ಬಲಿಯಾಗಿದ್ದ ವೃದ್ದ :

ಕಾಡಾನೆ ದಾಳಿಗೆ ಕಳೆದೆರಡು ದಿನಗಳ ಹಿಂದಷ್ಟೇ ಸಕಲೇಶಪುರ ತಾಲೂಕಿನ ಕಲ್ಲತೋಟ ಗ್ರಾಮದಲ್ಲಿನ ರಾಜದೀಪ ಎಂಬುವವರ ಕಾಫಿ ತೋಟದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 70 ವರ್ಷ ಪ್ರಾಯದ ಕೇರಳ ಮೂಲದ ರಾಮಕೃಷ್ಣ ಎಂಬುವವರು ಬಲಿಯಾಗಿದ್ದರು. 


ಮೂರು ದಿನಗಳ ಹಿಂದೆ ರಾಮಕೃಷ್ಣ ಅವರು ನಾಪತ್ತೆಯಾಗಿದ್ದು ಅವರನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದಾಗ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಈ ಕುರಿತಾಗಿ ತೋಟದ ಮಾಲೀಕರು ಬಂದು ತೋಟದಲ್ಲಿ ಎಲ್ಲೆಡೆ ಹುಡುಕಿದಾಗ ತೋಟದ ಮನೆಯಿಂದ ಕೆಲ ಅಂತರದಲ್ಲಿ ರೈಟರ್ ರಾಮಕೃಷ್ಣ ಮೃತಪಟ್ಟಿರುವುದು ಕಂಡಿದೆ. 

ಆನೆ ತುಳಿತಕ್ಕೆ ವ್ಯಕ್ತಿ ಬಲಿಯಾದ ಸ್ಥಳಕ್ಕೆ ಯಸಳೂರು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪದೇ ಪದೇ ಆನೆ ದಾಳಿಗಳು ನಡೆಯುತ್ತಲೇ ಇದ್ದು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನಹರಿಸಿ ಬೇರಾವುದೇ ಕೃಷಿಕರು ಅಥವಾ ನಿವಾಸಿಗಳ ಜೀವಕ್ಕೆ ಪ್ರಣಾಪಾಯಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.