ಚಿಕ್ಕಮಗಳೂರು :

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ರಕ್ಷಾ ಬಂಧನದ ಆಚರಣೆ : 

ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾವಡಿ ಶಾಖೆ, ಹಿಂದೂ ಸೇವಾ ಪ್ರತಿಷ್ಠಾನ ಇವರ ವತಿಯಿಂದ ತೊರೆಹಡ್ಲು ಶಾಲಾ ಸಭಾಭವನದಲ್ಲಿ ರಕ್ಷಾ ಬಂದನ ಉತ್ಸವ ಆಚರಣೆ ನಡೆಯಿತು. ಅನೇಕ ಸಂಖ್ಯೆಯಲ್ಲಿ ಸೇರಿದ್ದ ಸ್ವಯಂಸೇವಕರು, ಮಾತೆಯರು ಹಾಗೂ ಸ್ಥಳೀಯರು ಪರಸ್ಪರವಾಗಿ ರಕ್ಷೆಗಳನ್ನು ಕಟ್ಟಿಕೊಂಡು ರಕ್ಷಾಬಂಧನವನ್ನು ಆಚರಿಸಿದರು, ರಕ್ಷಾ ಬಂಧನದ ಸಂದೇಶವನ್ನು ಅರಿತರು. ಪ್ರಬೋಧಿನಿ ಗುರುಕುಲ ಹರಿಹರಪುರ ಇಲ್ಲಿನ ವ್ಯವಸ್ಥಾಪಕರಾದ ಉಮೇಶ್ ಬೌದ್ಧಿಕ್ ನೆರವೇರಿಸಿದರು ಅಧ್ಯಕ್ಷತೆಯನ್ನು ಹೆಗ್ಗದ್ದೆ ಶಿವಶಂಕರ್ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ಹಂಚಲಿ, ನೂತನ ಸೂರ್ಯ, ಗಿರೀಶ್ ಕಾವಡಿ, ಸುನೀಲ್ ಖಾಂಡ್ಯ ಇದ್ದರು.


ಅಂಧ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್  :

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ವಾರ್ಷಿಕೊತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಚಿಕ್ಕಮಗಳೂರು ಇವರ ವತಿಯಿಂದ ನಗರದ ಕೆಂಪನಹಳ್ಳಿಯ ಆಶಾಕಿರಣ  ಅಂಧ ಮಕ್ಕಳ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂಧ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಸಭಾಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ರವರು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಪ್ರಯುಕ್ತ ಅಂಧ ಮಕ್ಕಳ ಶಾಲೆಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿರುವುದು ಎಲ್ಲರಿಗೂ ಸಂತಸದ ಸಂಗತಿ, ಇದೇ ರೀತಿ ಎಲ್ಲಾ ಸಂಘ-ಸಂಸ್ಥೆಗಳು ಸೇವಾ ಮನೋಭಾವವನ್ನು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದರು. ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಎಲ್ಲ ಮಕ್ಕಳ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ವಂದೇ ಮಾತರಂ, ಜೈ ಹಿಂದ್ ಘೋಷಣೆಗಳನ್ನು ಹಾಕಿಸಿದರು. ಈ ಸಮಯದಲ್ಲಿ ಮಾಜಿ ಸೈನಿಕರಾದ ಮಂಜುನಾಥ್, ಕೃಷ್ಣೇಗೌಡರು, ಫಾದರ್ ವಿನಯ್ ಕುಮಾರ್ ರವರು,  ಪೊಲೀಸ್ ಅಧಿಕಾರಿಗಳಾದ ಸತ್ಯನಾರಾಯಣ್ ರವರು, ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ವಿಲ್ಸನ್ ರವರು, ಕೋ ಆಪರೇಟಿವ್ ಸೊಸೈಟಿಯ ಎಲ್ಲಾ ಸಿಬ್ಬಂದಿಗಳು ಇದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲೆಯ ಆವರಣ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು :

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರು ಭಾಗದ ಭೈರೇದೇವರಿನಲ್ಲಿ ಬಿಜೆಪಿಯ ಕಾರ್ಯಕರ್ತರು ಹರ್ ಘರ್ ತಿರಂಗಾ ಅಂಗವಾಗಿ ಮನೆಗಳಲ್ಲಿ ಧ್ವಜಾರೋಹಣ ನಡೆಸಿ ನಂತರದಲ್ಲಿ ಸ್ವಾತಂತ್ರ್ಯದ  ಅಮೃತ ಮಹೋತ್ಸವದ ನೆನಪಿಗಾಗಿ ಭೈರೇದೇವರು ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳಿಗೆ ಪುಸ್ತಕ ಹಾಗೂ ಪೆನ್ ವಿತರಣೆ ನಡೆಸಿದರು.

ತರೀಕೆರೆಯಲ್ಲಿ 700 ಅಡಿ ಉದ್ದದ ತಿರಂಗಾ ಮೆರವಣಿಗೆ :

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ತರೀಕೆರೆಯ ಇತಿಹಾಸದಲ್ಲೇ ಎರಡನೇ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ತರೀಕೆರೆ, ಇವರ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜು,ತರೀಕೆರೆ ನೆಹರು ಯುವ ಕೇಂದ್ರ ಚಿಕ್ಕಮಗಳೂರು ಇವರ ಸಹಕಾರದೊಂದಿಗೆ ದೇಶಾದ್ಯಂತ ನಡೆಯುತ್ತಿರುವ  ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು  700ಅಡಿ ಉದ್ದದ ತಿರಂಗ ಮೆರವಣಿಗೆ ನೆಡೆಯಿತು.  ತರೀಕೆರೆ ನಗರದ ಬಿ.ಹೆಚ್ ರಸ್ತೆಯಲ್ಲಿ ಸುಮಾರು 500  ರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವ ವೇದಿಕೆಯ ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು, ಸಾರ್ವಜನಿಕರು ಈ ಬೃಹತ್ ತಿರಂಗಾ ಮೆರವಣಿಗೆಯಲ್ಲಿ ಭಾಗವಹಿಸಿದರು.

ಶಿವಮೊಗ್ಗ 

ಸಾವರ್ಕರ್ ಭಾವ ಚಿತ್ರಕ್ಕೆ SDPI ಆಕ್ರೋಶ :

ಶಿವಮೊಗ್ಗ ನಗರದ ಸಿಟಿ ಸೆಂಟರ್ ಮಾಲ್​ನಲ್ಲಿ ಸಾವರ್ಕರ್ ಭಾವಚಿತ್ರ ಸಂಬಂಧ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ಸಾವರ್ಕರ್ ಭಾವಚಿತ್ರ ಇರುವುದನ್ನು ಕಂಡು ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಆಜಾದ್ ಚಂದ್ರಶೇಖರ್, ಸರ್ದಾರ್ ವಲ್ಲಭಬಾಯಿ ಪಟೇಲ್, ವಿನಾಯಕ ದಾಮೋದರ ಸಾರ್ವರ್ಕರ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಭಾವಚಿತ್ರ ಇರುವುದಕ್ಕೆ ಎಸ್​​ಡಿಪಿಐ ಕಾರ್ಯಕರ್ತರು ಆಕ್ರೋಶ ಹೊರಹಾಕಿದ ಕಾರ್ಪೊರೇಟರ್​​ ಓರ್ವರ ಪತಿ ಹಾಗೂ ಎಸ್​​ಡಿಪಿಐ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರ ಆಸೀಫ್ ಮತ್ತು ಆತನ ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿದರು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಏಕೆ ಹಾಕಿದ್ದೀರಿ‌, ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಮಾಲ್ ನ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಕಾಂಗ್ರೆಸ್ ನಾಯಕರಿಗೆ ಅಭ್ಯಾಸ ವರ್ಗದ ಅವಶ್ಯಕತೆಯಿದೆ : ಕೆ.ಎಸ್ ಈಶ್ವರಪ್ಪ :

ರಾಷ್ಟ್ರಧ್ವಜದ ಬಣ್ಣದ ಬಗ್ಗೆ ತಿಳಿಸಲು ಕಾಂಗ್ರೆಸ್ ನಾಯಕರಿಗೆ ಒಂದು ಅಭ್ಯಾಸ ವರ್ಗ ಮಾಡುವ ಅವಶ್ಯಕತೆ ಇದೆ ಎಂದು ಕೆ.ಎಸ್.ಈಶ್ವರಪ್ಪ ಟೀಕೆ ಮಾಡಿದ್ದಾರೆ. ತಿರಂಗಾ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ತಿರಸ್ಕಾರ ಮತ್ತು ಅಜ್ಞಾನ ಇದ್ದು ತ್ರಿವರ್ಣ ಧ್ವಜ, ರಾಷ್ಟ್ರಭಕ್ತಿ ಬಗ್ಗೆ ಈಗಿನ ಕಾಂಗ್ರೆಸ್‌ನವರಿಗೆ ಕಲ್ಪನೆಯೇ ಇಲ್ಲ ಎಂದು ಕುಟುಕಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಪು, ಬಿಳಿ, ಹಸಿರು ಎಂದು ತ್ರಿವರ್ಣ ಧ್ವಜದ ಬಣ್ಣವನ್ನೇ ಬೇರೆ ರೀತಿಯಲ್ಲಿ ಹೇಳಿದ್ದಾರೆ. ರಾಷ್ಟ್ರದ ಕುರಿತಾದ ಜ್ಞಾನ ಕಡಿಮೆ ಇರುವ ಕಾರಣ ಕಾಂಗ್ರೆಸ್ ನಾಯಕರಿಗೆ ಅಭ್ಯಾಸ ವರ್ಗದ ಅವಶ್ಯಕತೆಯಿದೆ ಎಂದು ಕಿಡಿಕಾರಿದರು.

ಹಾಸನ :

ಕೋರ್ಟ್ ಆವರಣದಲ್ಲಿ ಪತ್ನಿಗೆ ಚಾಕು ಹಾಕಿ ಹತ್ಯೆ ಗೈದ ಪತಿ :

ಕೋರ್ಟ್ ಆವರಣದಲ್ಲಿಯೇ ಪತಿ ಮಾರಣಾಂತಿಕವಾಗಿ ಪತ್ನಿಯ ಮೇಲೆ ಚಾಕು ಇರಿತ ನಡೆಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶಿವಕುಮಾರ್ ಎಂಬಾತ ತನ್ನ ಪತ್ನಿ ಚೈತ್ರಾಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಕೂಡಲೇ ಆಕೆಯನ್ನು ಹಾಸನದ ಮೆಡಿಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಚಾಕು ಹಾಕಿ ಎಸ್ಕೇಪ್ ಆಗುತ್ತಿದ್ದ ಪತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.