ಚಿಕ್ಕಮಗಳೂರು :

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಲಾರಿ :

ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೊರವಲಯದ ದುರ್ಗಾದೇವಸ್ಥಾನದ ಬಳಿಯಲ್ಲಿ ಲಾರಿಯು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿದೆ. ವಾಹನ ಓಡಿಸುತ್ತಿದ್ದ ಚಾಲಕನಿಗೆ  ಬ್ರೇಕ್ ಸಿಗದ ಪರಿಣಾಮ ಸೂಕ್ತ ಸಮಯದಲ್ಲಿ ವಾಹನವನ್ನು ನಿಯಂತ್ರಣಕ್ಕೆ ತರಲಾಗದ ಕಾರಣ  ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಲಾರಿಯಲ್ಲಿದ್ದ ಜಲ್ಲಿಕಲ್ಲು ನೆಲಸಮವಾಗಿದೆ. ಲಾರಿ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಭತ್ತದ ಗದ್ದೆಯಲ್ಲಿ ಭಾರೀ ಮಟ್ಟದ ಭೂಕುಸಿತ :

ನಾಟಿ ಮಾಡಲು ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ಭತ್ತದ ಗದ್ದೆಯಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.ಮನೋಜ್ ಎಂಬುವರ ಗದ್ದೆಯನ್ನು ನಾಟಿಗೆ ಹದಗೊಳಿಸಲಾಗಿತ್ತು. ದೊಡ್ಡ ಸದ್ದು ಕೇಳಿಬಂದ ಪರಿಣಾಮ ರೈತರು ಗದ್ದೆಯ ಕಡೆ ಹೋಗಿ ನೋಡಿದಾಗ ಗದ್ದೆಯಲ್ಲಿ 60ರಿಂದ 70 ಅಡಿ ಅಗಲಕ್ಕೆ ಕಂದಕದಂತಹ ಪ್ರದೇಶ ನಿರ್ಮಾಣಆಗಿದೆ. ಗದ್ದೆ ಮಧ್ಯೆ ಭಾಗದಲ್ಲಿ ಭೂ ಕುಸಿತವಾಗಿರುವುದನ್ನು ಕಂಡ ಕೃಷಿಕ ಮನೋಜ್ ಆತಂಕಕ್ಕೀಡಾಗಿದ್ದಾರೆ.

ಕೊಡಗು :

ದಸರಾ ತಯಾರಿಯತ್ತ ಹೆಜ್ಜೆ ಹಾಕಿದ ದಸರಾ ಗಜಪಡೆ :

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಅಂಬಾರಿ ಆನೆಯಾದ ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ, ಭೀಮ ಆನೆಗಳು ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪಯಣ ಬೆಳೆಸಿದವು. ಆನೆಗಳ ಜೊತೆಗೆ ಮಾವುತರು ಸಹ ತೆರಳಿದ್ದು ದಸರಾ ಸಂಭ್ರಮದ ಆರಂಭಕ್ಕೆ ಅದ್ಧೂರಿ ತಯಾರಿಗಳು ಆರಂಭವಾಗಿದೆ. 

ಭಾರೀ ಮಳೆಗೆ ನಿರಾಶ್ರಿತರಾದ ಕೊಡಗಿನ ಅನೇಕ ಜನರು ; ಕೆಲವೆಡೆ ರಸ್ತೆಗಳು ಜಲಾವೃತ

ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು ಮಳೆಯು ತೀವ್ರತೆಯನ್ನು ಪಡೆದುಕೊಂಡಿದೆ. ಬಿಡುವು ನೀಡದ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಇಲ್ಲಿನ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಪ್ರವಾಹದ ನೀರು ಬಂದಿದೆ. ಭಾರೀ ಮಳೆಯಿಂದ ರೋಸಿ ಹೋಗಿರುವ ಕೊಡಗಿನ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗೆಟ್ಟ ಜನ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.  

ಹಾಸನ :

ಆನೆ ತುಳಿತಕ್ಕೆ ವ್ಯಕ್ತಿ ಬಲಿ :

ಸಕಲೇಶಪುರ : ಕಾಡಾನೆ ದಾಳಿಗೆ ವೃದ್ದನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲತೋಟ ಗ್ರಾಮದಲ್ಲಿನ ರಾಜದೀಪ ಎಂಬುವವರ ಕಾಫಿ ತೋಟದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 70 ವರ್ಷ ಪ್ರಾಯದ ಕೇರಳ ಮೂಲದ ರಾಮಕೃಷ್ಣ ಆನೆ ತುಳಿತಕ್ಕೆ ಬಲಿಯಾದ ಮೃತ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ರಾಮಕೃಷ್ಣ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದ್ದು ಅವರನ್ನು ಸುತ್ತಮುತ್ತಲಿನ  ಪ್ರದೇಶಗಳಲ್ಲಿ ಹುಡುಕಿದಾಗ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಈ ಕುರಿತಾಗಿ ತೋಟದ ಮಾಲೀಕರು ಬಂದು ತೋಟದಲ್ಲಿ ಎಲ್ಲೆಡೆ ಹುಡುಕಿದಾಗ ತೋಟದ ಮನೆಯಿಂದ ಕೆಲ ಅಂತರದಲ್ಲಿ ರೈಟರ್ ರಾಮಕೃಷ್ಣ ಮೃತಪಟ್ಟಿರುವುದು ಕಂಡಿದೆ. ಆನೆ ತುಳಿತಕ್ಕೆ ವ್ಯಕ್ತಿ ಬಲಿಯಾದ ಸ್ಥಳಕ್ಕೆ ಯಸಳೂರು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.