ಇದನ್ನೂ ಓದಿ : ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು ವಿನಯ್ ವಿಧಿವಶ ; ಶೋಕಸಾಗರದಲ್ಲಿ ಕುಟುಂಬ ಹಾಗೂ ಸ್ನೇಹಿತವರ್ಗ
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾರ್ಯ ಗ್ರಾಮದಲ್ಲಿ ಆನೆ ದಾಳಿ ನಡೆಸಿ ಅಪಾರ ಪ್ರಮಾಣದ ಅಡಿಕೆ ಮರಗಳನ್ನು ಹಾನಿಗೊಳಿಸಿದೆ. ಸಾರ್ಯ ಗ್ರಾಮದ ರಘು ಕೆ.ಟಿ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ನೂರಕ್ಕೂ ಅಧಿಕ ಫಸಲು ನೀಡುವ ಅಡಿಕೆ ಮರಗಳನ್ನು ನಾಶಗೊಳಿಸಿದೆ. ಆನೆ ದಾಳಿಯಿಂದ ಕಂಗಾಲಾಗಿರುವ ಕೃಷಿಕ ರಘು ಮುಂದಿನ ಜೀವನ ನಿರ್ವಹಣೆ ತೋಟಕ್ಕೆ ವ್ಯಯಿಸಿದ ಹಣದ ಕುರಿತಾಗಿ ಮುಂದೇನು ಎಂಬ ಆತಂಕಕ್ಕೊಳಗಾಗಿದ್ದಾರೆ.
ಅನೇಕ ಸಮಯಗಳಿಂದ ಈ ಭಾಗದಲ್ಲಿ ಆನೆ ದಾಳಿ ನಡೆಯುತ್ತಿದ್ದು ತೋಟಗದ್ದೆಗಳಲ್ಲಿ ಕೃಷಿಯನ್ನೇ ಜೀವನಾಧಾರವಾಗಿಟ್ಟುಕೊಂಡು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕರು ಭಯಭೀತರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ, ಸರ್ಕಾರ ಹಾಗೂ ಅಧಿಕಾರಿಗಳು ಆನೆದಾಳಿಯ ನಿಯಂತ್ರಣದ ಸಲುವಾಗಿ ಕಾರ್ಯನಿರ್ವಹಿಸಬೇಕು - ಪುರುಷೋತ್ತಮ್ ಕೂಸ್ಗಲ್, ಸ್ಥಳೀಯರು
ಆನೆ ದಾಳಿ ಇದೇನು ಮೊದಲಲ್ಲ :
ಹಾಸನ, ಸಕಲೇಶಪುರ, ಕೊಡಗು ಭಾಗದಲ್ಲಿ ನಡೆಯುತ್ತಿದ್ದ ಆನೆದಾಳಿಯು ಇತ್ತೀಚಿನ ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ನರಸಿಂಹರಾಜಪುರ, ಜಯಪುರ, ಮೂಡಿಗೆರೆ ಸೇರಿದಂತೆ ಅನೇಕ ಭಾಗಗಳಲ್ಲಿ ನಡೆಯಲು ಆರಂಭಿಸಿದೆ. ನರಸಿಂಹರಾಜಪುರದ ಅನೇಕ ಭಾಗಗಳಲ್ಲಿ ಈ ಹಿಂದಿನಿಂದಲೂ ಆನೆ ದಾಳಿ ನಡೆಯುತ್ತಲೇ ಇದ್ದು ತೋಟ ಗದ್ದೆಗಳಲ್ಲಿ ಕಾರ್ಯನಿರ್ವಹಿಸುವ ಕೃಷಿಕರು, ಕಾರ್ಮಿಕರು ಭಯದಲ್ಲಿ ಕೆಲಸ ಮಾಡಬೇಕಾದ ವಾತಾವರಣ ನಿರ್ಮಾಣವಾಗಿದೆ.
ಆನೆ ದಾಳಿ ನಿಯಂತ್ರಣದ ಸಲುವಾಗಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡು ಕೃಷಿಕರಿಗೆ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಸ್ಥಳೀಯರು ಕೋರಿದ್ದಾರೆ.
ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಈ ಕುರಿತು ವರದಿಯನ್ನು ಸರ್ಕಾರಕ್ಕೆ ನೀಡಿ ಆನೆದಾಳಿಯಿಂದ ಜೀವನಾಧಾರವಾದ ಅಡಿಕೆ ಮರಗಳನ್ನು ಹಾಗೂ ಬೆಳೆಯನ್ನು ನಾಶ ಹೊಂದಿರುವ ರೈತನಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.






0 Comments