ಖ್ಯಾತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣನವರು ಹೃದಯಾಘಾತದಿಂದ ನಿನ್ನೆ  ಕೊನೆಯುಸಿರೆಳೆದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. 

ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ (85) ರವರು ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಗಳನ್ನು ಮಾಡಿದ್ದ ಸಾಧನಾಕೊಂಡಿ ಕಳಚಿಬಿದ್ದು ಅಗಾಧವಾದ ನೋವನ್ನು ಉಂಟುಮಾಡಿದೆ.
 


ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡುವ ಸಲುವಾಗಿ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು, ಈ ವೇಳೆ  ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲೇ ಸಂಗೀತದ ಪ್ರತಿಭೆ ಶಿವಮೊಗ್ಗ ಸುಬ್ಬಣ್ಣ ರವರು ಕೊನೆಯುಸಿರೆಳೆದಿದ್ದಾರೆ. 

ಶಿವಮೊಗ್ಗ ಸುಬ್ಬಣ್ಣ ಅವರ ಮೂಲನಾಮ ಜಿ.ಸುಬ್ರಮಣ್ಯ ಮೂಲತಃ ಶಿವಮೊಗ್ಗದವರಾದ ಅವರನ್ನು ಶಿವಮೊಗ್ಗ ಸುಬ್ಬಣ್ಣ ಎಂದೇ ಎಲ್ಲೆಡೆ ಖ್ಯಾತರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ ನಿಧನಕ್ಕೆ ಸಂಗೀತಪ್ರಿಯರು ಹಾಗೂ ಸಂಗೀತ ಲೋಕದ ಮಹನೀಯರು ಅತೀವವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಸುಬ್ಬಣ್ಣ ಅವರಿಗೆ ಸಂದ ಪ್ರಶಸ್ತಿಗಳು :
1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ಹಾಗೂ 2018 ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ ನೀಡಿ ಪುರಸ್ಕರಿಸಿತ್ತು. 1938-2022 ಕನ್ನಡಕ್ಕೆ ಪ್ರಥಮ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಹಿನ್ನೆಲೆ ಗಾಯಕ ಎಂಬ ಹೆಗ್ಗಳಿಕೆಗೆ ಶಿವಮೊಗ್ಗದ ಸುಬ್ಬಣ್ಣ ಪಾತ್ರರಾಗಿದ್ದರು. 


ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಹಾಡಿನಿಂದ ಬಹಳಷ್ಟು ಹೆಸರು ಮಾಡಿದ್ದ ಅವರು ಎಲ್ಲೆಡೆ ಖ್ಯಾತಿ ಪಡೆದಿದ್ದರು. ಅವರ ಅಗಲುವಿಕೆ ಅಪಾರ ಅಭಿಮಾನಿಗಳಲ್ಲಿ ಹಾಗೂ ಸಂಗೀತದ ಹಿರಿಯ ದಿಗ್ಗಜರಲ್ಲಿ ಬೇಸರ ಮೂಡಿಸಿದೆ.

ಶಿವಮೊಗ್ಗದ ಸುಬ್ಬಣ್ಣ ಅವರ ಮರಣದ ಕುರಿತಾಗಿ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿಗಳಾದ ನರೇಂದ್ರ ಮೋದಿ ಶ್ರೇಷ್ಠ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಕನ್ನಡ ಹಾಡುಗಳು ಮತ್ತು ಸಂಗೀತಾಭಿಮಾನಿಗಳ ಮನೆಮಾತಾಗಿದ್ದರು. ಅವರ ಹಾಡುಗಳು ಅಪಾರ ಮೆಚ್ಚುಗೆ ಪಡೆದಿವೆ ಮತ್ತು ಕನ್ನಡ ಕಾವ್ಯದ ಮುತ್ತುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು, ಓಂ ಶಾಂತಿ ಎಂದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.