ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಭಂಗಕ್ಕೆ ಯತ್ನಿಸುವ ಶಂಕೆಯಿರುವ ಕಾರಣಕ್ಕೆ ಇಬ್ಬರು ರೌಡಿಶೀಟರ್ ಗಳನ್ನು ಗಡಿಪಾರು ಮಾಡಿ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ.

ಇದನ್ನೂ ಓದಿ : ಔಷಧ ಖರೀದಿಸಲು ನಿಂತಿದ್ದ ವೃದ್ಧೆಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಸಿಯಲು ಯತ್ನ

ಶಿವಮೊಗ್ಗದ ಆಶ್ರಯ ಬಡಾವಣೆಯ ಶಮಂತ ಅಲಿಯಾಸ್ ಶಮಂತ ನಾಯ್ಕ (29)ಮತ್ತು ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್ (29) ಈ ಇಬ್ಬರು ರೌಡಿಶೀಟರ್ ಗಳು ಗಡಿಪಾರಾದವರು. ಇವರು ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆ ಪ್ರದರ್ಶಿಸುತ್ತ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಅಪರಾಧ ಕೃತ್ಯಗಳನ್ನೆಸಗಿ ದುರ್ನಡತೆ ಮುಂದುವರಿಸಿಕೊಂಡು ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು ಶಾಂತಿ ಹಾಗೂ ಸುವ್ಯವಸ್ಥೆಗೆ ಯಾವುದೇ ಅಡ್ಡಿಯುಂಟಾಗಬಾರದ ಹಿನ್ನೆಲೆಯಲ್ಲಿ ಇಬ್ಬರನ್ನೂ ಗಡಿಪಾರು ಮಾಡಿ ಉಪ ವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ. 


ರೌಡಿ ಶೀಟರ್ ಶಮಂತ್ ಮೇಲೆ 15 ಮತ್ತು ಸಂದೀಪ್ ಮೇಲೆ 10 ಪ್ರಕರಣಗಳಿದ್ದು ಇಬ್ಬರೂ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್ ಗಳಾಗಿದ್ದಾರೆ. ಗಣಪತಿ ಹಬ್ಬದ ಸಮಯದಲ್ಲಿಯೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟು ಮಾಡುವ ಸಾಧ್ಯತೆಗಳಿವೆ. ಎಚ್ಚರಿಕೆ ನೀಡಿದರೂ ತಮ್ಮ ನಡಾವಳಿಕೆ ಬದಲಿಸಿಕೊಳ್ಳದ ಕಾರಣ ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಇಬ್ಬರನ್ನು ಗಡಿಪಾರು ಮಾಡುವಂತೆ ಎಸ್ಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಉಪವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಿದ್ದರು. ಅದರಂತೆ ಗುರುವಾರದಿಂದ ಸೆಪ್ಟೆಂಬರ್ 25ರವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇನ್ನೇನು ಒಂದು ವಾರಗಳಲ್ಲಿ ಗಣೇಶ ಚತುರ್ಥಿ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದ ರೀತಿಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.