ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೆ ಶವದ ಕ್ರಿಯೆಯನ್ನು ಮಾಡಲು ಪ್ರತಿಭಟನೆಯ ಮೂಲಕ ಸ್ಮಶಾನಕ್ಕೆ ದಾರಿಯನ್ನು ಬಿಡಿಸಿಕೊಂಡಿರುವ ಮನಕಲುಕುವ ಘಟನೆಯೊಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳುವ ಮಾರ್ಗಕ್ಕಾಗಿ ಸಮಸ್ಯೆ ತಲೆದೋರಿದ್ದು ಇಲ್ಲಿ ಸತ್ತವರ ಅಂತ್ಯಕ್ರಿಯೆಗೂ ಪರದಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ರಾಷ್ಟ್ರ ಧ್ವಜವನ್ನು ಸಿಗರೇಟ್ ನಿಂದ ಸುಟ್ಟಿದ್ದ ಕಿಡಿಗೇಡಿ ಅರೆಸ್ಟ್
ಹಿರೇಕಾನವಂಗಲ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಖಾಸಗೀ ವ್ಯಕ್ತಿಗಳು ಉಳುಮೆ ಮಾಡಿದ್ದು ಇದರಿಂದಾಗಿ ಸ್ಮಶಾನಕ್ಕೆ ತೆರಳಲು ಜಾಗವೇ ಇಲ್ಲದಂತಾಗಿತ್ತು. ಇದರಿಂದಾಗಿ ಸಿಟ್ಟಾದ ಗ್ರಾಮಸ್ಥರು ಸ್ಮಶಾನದ ರಸ್ತೆಯ ಅವಶ್ಯಕತೆಯಿರುವ ಕಾರಣ ರಸ್ತೆಗೆ ಶವವಿದ್ದ ಟ್ರಾಕ್ಟರ್ ನ್ನು ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಜ್ಜಂಪುರ ಠಾಣೆಯ ಪೊಲೀಸರು ರಸ್ತೆತಡೆ ನಿಲ್ಲಿಸುವಂತೆ ಮನವಿ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಗ್ರಾಮದಲ್ಲಿ 250 ಮನೆಗಳಿದ್ದು ಇರುವುದು ಒಂದೇ ಸ್ಮಶಾನವಾಗಿದೆ. ಅದರಲ್ಲೂ ಒಂದು ಎಕರೆ ಜಾಗ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿದ್ದು ಅಧಿಕಾರಿಗಳ ಗಮನದಲ್ಲಿ ಈ ವಿಷಯವಿದ್ದರೂ ಯಾವುದೇ ಕ್ರಮಗಳನ್ನು ಜರುಗಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಜಾಗಕ್ಕೆ ಸಂಬಂಧಿಸಿದಂತೆ ಮಾವ ಅಳಿಯನ ನಡುವೆ ಒಳ ಜಗಳವಿದ್ದು ಇಬ್ಬರೂ ಅಡಿಕೆಯನ್ನು ಕೃಷಿ ಮಾಡಿದ್ದಾರೆ, ಸ್ಮಶಾನಕ್ಕಾಗಿ ದಾರಿಬಿಡಲು ಯೋಚನೆ ಮಾಡುತ್ತಿರುವ ಪರಿಣಾಮ ಇಂತಹ ದೊಡ್ಡ ಸಮಸ್ಯೆ ಎದುರಾಗಿದೆ ಎಂಬುದಾಗಿ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಘಟನಾ ಸಂಬಂಧ ಮಾತನಾಡಿದ ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ, ದಾರಿಯು ಅವರದ್ದೇ ಜಮೀನಿನಲ್ಲಿ ಹಾದು ಹೋಗಿದೆ, ನಕಾಶೆ ದಾರಿ ಒತ್ತುವರಿಯಾಗಿಲ್ಲ. ಕುಟುಂಬದ ನಡುವೆ ಸಮಸ್ಯೆ ಕಲಹ ಏರ್ಪಟ್ಟಿರುವ ಕಾರಣ ದಾರಿಗೆ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರ್ವೇ ನಡೆಸಿ ಗ್ರಾಮಸ್ಥರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
300 ರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಸ್ಥಳೀಯರು ಭಾರೀ ಮಟ್ಟದ ಪ್ರತಿಭಟನೆ ನಡೆಸಿ ಸಮಸ್ಯೆಗೆ ಪೂರಕವಾದ ಪರಿಹಾರ ಒದಗಿಸಲೇಬೇಕೆಂದು ಆಗ್ರಹಿಸಿದ್ದು ಈ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗೆ ಪೂರಕವಾದ ಸ್ಪಂದನೆಯನ್ನು ಒದಗಿಸಬೇಕಿದೆ.

.jpeg)




0 Comments