ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಬೈಕಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ 27 ರ ಶಾಂತಿಪುರದ ಬಳಿ ಮಾರುತಿ ರಿಟ್ಜ್ ಕಾರು ಹಾಗೂ ಬಜಾಜ್ ಪಲ್ಸರ್ ಬೈಕ್ ನಡುವೆ ಭೀಕರ ಅಪಘಾತ ನಡೆದಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಗುದ್ದಿದ್ದ ಕಾರು ರಸ್ತೆ ಬದಿಯಲ್ಲಿದ್ದ ಮನೆಯೊಂದಕ್ಕೆ ಗುದ್ದಿ ಮಗುಚಿ ಬಿದ್ದಿದೆ. ಕಾರು ಗುದ್ದಿದ ರಭಸಕ್ಕೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಎಂಬಂತೆ ಮನೆಯಲ್ಲಿದ್ದವರಿಗೆ ಯಾವುದೇ  ಅಪಾಯಕ್ಕೊಳಗಾಗಾದೆ ಸುರಕ್ಷಿತವಾಗಿದ್ದಾರೆ. 

ಇದನ್ನೂ ಓದಿ : 150 MBBS ಸೀಟುಗಳೊಂದಿಗೆ ಚಿಕ್ಕಮಗಳೂರಿನ ವೈದ್ಯಕೀಯ ಕಾಲೇಜಿಗೆ ಪ್ರವೇಶಾತಿ


ಶುಕ್ರವಾರ ಮಧ್ಯಾಹ್ನ ಬಾಳೆಹೊನ್ನೂರು ಕಡೆಯಿಂದ ಬರುತ್ತಿದ್ದ ಕಾರು ಜಯಪುರ ಕಡೆಯಿಂದ ಬರುತ್ತಿದ್ದ ಬೈಕಿಗೆ ಗುದ್ದಿದ್ದು ಭದ್ರಾವತಿ ಮೂಲದ ಬೈಕಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು ಅತೀ ಕಿರಿದಾದ ರಸ್ತೆಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಪ್ರಯಾಣಿಕರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ನಿಧಾನಗತಿಯಲ್ಲಿ ಸಾಗಬೇಕಿದೆ.