ಮೂಡಿಗೆರೆ : ಕಸವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಡಂಪಿಂಗ್ ಯಾರ್ಡ್ ನ ಹೊಂಡಕ್ಕೆ ತ್ಯಾಜ್ಯವನ್ನು ತುಂಬಿಕೊಂಡಿದ್ದ ಆಟೋ ಬಿದ್ದಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಬಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕಸದ ಜೊತೆ ಡಂಪಿಂಗ್ ಯಾರ್ಡ್ ಗೆ  ಗಾರ್ಬೇಜ್ ಆಟೋ ಸಹ ಡಂಪ್ ಆಗಿದೆ. 

ಇದನ್ನೂ ಓದಿ : ಕೊಪ್ಪ: ಸರ್ಕಾರಿ ಕಾಲೇಜು ಪ್ರಾಂಶುಪಾಲರ ಹೆಂಡ್ತಿಯ ರೀಲ್ಸ್ ಹುಚ್ಚು


ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಮಾರ್ಗದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಡಂಪಿಂಗ್ ಯಾರ್ಡ್ ನಿರ್ಮಿಸಿದೆ, ಸುತ್ತಲಿನ ಗ್ರಾಮಗಳ ಕಸವನ್ನು ಸಂಗ್ರಹಿಸಿ ಡಂಪಿಂಗ್ ಯಾರ್ಡ್ ನಲ್ಲಿ ಡಂಪ್ ಮಾಡುವ ವೇಳೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ ಒಳಕ್ಕೆ ಬಿದ್ದಿದೆ. ಕಸ ವಿಲೇವಾರಿ ಘಟಕದ ಬಳಿ ಸೂಕ್ತವಾದ ರಸ್ತೆ ಇಲ್ಲದೆ ಇರುವುದರಿಂದ ಮಳೆ ಬಂದು ಸಾಕಷ್ಟು ಕೆಸರು ತುಂಬಿದ ಪರಿಣಾಮ ಆಟೋ ಕೆಳಬಿದ್ದಿದೆ ಎನ್ನಲಾಗಿದೆ. 

ಈ ಅವಘಡ ಸಂಭವಿಸಿದ ಕೆಲ ಸಮಯದ ಬಳಿಕದಲ್ಲಿ ಜೆಸಿಬಿಯನ್ನ ಕರೆಸಿ ಸುಮಾರು 12 ಅಡಿ ಆಳದ ಗುಂಡಿಯೊಳಕ್ಕೆ ಬಿದ್ದಿದ್ದ ಆಟೋವನ್ನು ಮೇಲಕ್ಕೆತ್ತಲಾಗಿದೆ. ಕಸದ ಆಟೋ ಜೊತೆಗೆ ಆಟೋ ಚಾಲಕ ಕೂಡ ಗುಂಡಿಯೊಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಎಂಬಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗಳು ಆತನಿಗೆ ಆಗದೆ ಸಣ್ಣ ಪುಟ್ಟ ಗಾಯಗಳಾಗಿದೆ. ಆಟೋ ಗುಂಡಿಯೊಳಕ್ಕೆ ಬಿದ್ದ ಕೂಡಲೇ ಚಾಲಕ ಮೇಲೆದ್ದು ಬಂದಿದ್ದಾನೆ ಎನ್ನಲಾಗಿದೆ.

ತನು ಕೊಟ್ಟಿಗೆಹಾರ, ವರದಿಗಾರರು