ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಪಟ್ಟಣದ ಟೌನ್ ಹಾಲ್ ಬಳಿ ಇರುವ DySP ನಿವಾಸದ ಮುಂಭಾಗ ವ್ಯಾಪಾರಿಯೊಬ್ಬರು ತರಕಾರಿ ಅಂಗಡಿ ಹಾಕಿದ್ದು, ಆ ಅಂಗಡಿಯನ್ನು ತೆಗೆಯುವಂತೆ ದರ್ಪ ಮೆರೆದಿದ್ದು, ತರಕಾರಿಗಳ ಮೇಲೆ ಕಾಲಿಟ್ಟು ಹಲ್ಲೆಗೈದಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು.

ಕೈಮೇಲೆ ಹೊಡೆದಿದ್ದಾರೆ; ತರಕಾರಿ ಅಂಗಡಿ ಮಾಲೀಕನ ಆರೋಪ

ಈ ಕುರಿತು ನ್ಯೂಸ್ ಮಲ್ನಾಡ್ ಬೀದಿ ಬದಿ ವ್ಯಾಪಾರಿ ಕೃಷ್ಣ ಅವರನ್ನು ಸಂಪರ್ಕಿಸಿದಾಗ, ಅಂಗಡಿ ಖಾಲಿ ಮಾಡುವಂತೆ ಈ ಹಿಂದೆ ತಿಳಿಸಿದ್ದು ನಾನೂ ಇದಕ್ಕೆ ಒಪ್ಪಿಕೊಂಡಿದ್ದೆ. ಆದರೆ ಇಂದು ಬೆಳಿಗ್ಗೆ 9:30 ರ ಸುಮಾರಿಗೆ ಏಕಾಏಕಿ ಅಂಗಡಿ ಬಳಿ ಬಂದು ಕಾಲರ್ ಹಿಡಿದು ಕೈಮೇಲೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ನ್ಯೂಸ್ ಮಲ್ನಾಡ್ ಕೊಪ್ಪದ ಸಹಾಯಕ ಪೊಲೀಸ್ ಅಧೀಕ್ಷಕರಾಗಿರುವ (ASP) ಗುಂಜನ್ ಆರ್ಯ, IPS ಅವರನ್ನು ಸಂಪರ್ಕಿಸಿದಾಗ ಅವರು ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ಕೊಪ್ಪದ ಡಿವೈಎಸ್ಪಿ ಅವರ ನಿವಾಸದ ಮುಂಭಾಗ ಬೀದಿ ಬದಿ ವ್ಯಾಪಾರಿಯೊಬ್ಬರು ತರಕಾರಿ ಅಂಗಡಿಯನ್ನು ಹಾಕಿದ್ದರು. ಸುಮಾರು ಮೂರು ತಿಂಗಳಿಂದ ಇದೇ ಜಾಗದಲ್ಲಿ ಅವರು ತರಕಾರಿ ಅಂಗಡಿ ಹಾಕುತ್ತಿದ್ದು, ಈ ಹಿಂದೆಯೇ ಎಎಸ್ಪಿ ಗುಂಜನ್ ಆರ್ಯ ಅವರು ಈ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಇಲ್ಲ, ಬೇರೆ ಎಲ್ಲಾದರೂ ಹಾಕಿಕೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ವ್ಯಾಪಾರಿಯೂ ಒಪ್ಪಿಕೊಂಡಿದ್ದು, ಬೇರೆಡೆ ತರಕಾರಿ ಅಂಗಡಿ ಹಾಕುವುದಾಗಿ ಇರುವ ಜಾಗವನ್ನು ಖಾಲಿ ಮಾಡುವುದಾಗಿ ತಿಳಿಸಿದ್ದರು.


ಹಲ್ಲೆ ಮಾಡಿರುವುದು ಸತ್ಯಕ್ಕೆ ದೂರವಾಗಿದೆ, ತಾಳ್ಮೆ ಕಳೆದುಕೊಂಡು ಮಾತನಾಡಿದ್ದೇನೆ; ಎಎಸ್ಪಿ ಸ್ಪಷ್ಟನೆ

ಮನವಿ ಮಾಡಿದ ಮೂರು ತಿಂಗಳ ಬಳಿಕವೂ ಅಂಗಡಿಯನ್ನು ಸ್ಥಳಾಂತರಗೊಳಿಸದೆ ತಮ್ಮ ನಿವಾಸದ ಮುಂಭಾಗವೇ ಹಾಕಿದ್ದನ್ನು ಕಂಡ ಎಎಸ್ಪಿ ಗುಂಜನ್ ಆರ್ಯ ಇಂದು ಬೆಳಿಗ್ಗೆ ವ್ಯಾಪಾರಿಗೆ ಏರುಧ್ವನಿಯಲ್ಲಿ ಪ್ರಶ್ನಿಸಿದ್ದು, ಕೂಡಲೇ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಗೊಳಿಸುವಂತೆ ಹೇಳಿದ್ದಾರೆ. ಸುಮಾರು ಏಳೆಂಟು ಬಾರಿ ಅವರಿಗೆ ಮನವಿ ಮಾಡಿದ್ದು, ಅತ್ಯಂತ ಮೃದುವಾಗಿ ಹೇಳಿದ್ದೇನೆ. ಆದರೂ ಮತ್ತೆ ಅಲ್ಲೇ ವ್ಯಾಪಾರ ಮಾಡುತ್ತಿದ್ದಾಗ ತಾಳ್ಮೆ ಕಳೆದುಕೊಂಡು ಜೋರು ಧ್ವನಿಯಲ್ಲಿ ಹೇಳಿದ್ದೇನೆ. ಆದರೆ ಅವರಿಗೆ ಹಲ್ಲೆಯಾಗಲಿ, ತರಕಾರಿಗಳನ್ನು ಎಸೆಯುವುದಾಗಲಿ ಮಾಡಿಲ್ಲ ಎಂದು ಗುಂಜನ್ ಆರ್ಯ ತಿಳಿಸಿದ್ದಾರೆ.

ಮಲೆನಾಡಿನವರು ತುಂಬಾ ಮೃದು ಸ್ವಾಭಾವದವರಾಗಿದ್ದರಿಂದ ನಾನು ಅದೇ ರೀತಿಯಲ್ಲಿ ಎಲ್ಲರೊಂದಿಗೆ ವರ್ತಿಸುತ್ತೇನೆ. ಅನೇಕ ಬಾರಿ ಮನವಿ ಮಾಡಿದ್ದರೂ ತೆರವು ಮಾಡದ ಹಿನ್ನಲೆಯಲ್ಲಿ ತಾಳ್ಮೆ ಕಳೆದುಕೊಂಡು ಏರು ಧ್ವನಿಯಲ್ಲಿ ಮಾತನಾಡಿದ್ದೇನೆ. ಅವರ ಮೇಲೆ ಹಲ್ಲೆ ಮಾಡಿಲ್ಲ. ತರಕಾರಿ ಇಟ್ಟ ಜಾಗದಲ್ಲಿ ಜಾರಿ ಬಿದ್ದಿದ್ದೇನೆ. ಉದ್ದೇಶಪೂರ್ವಕವಾಗಿ ತರಕಾರಿ ಮೇಲೆ ಕಾಲಿಟ್ಟಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. - ಗುಂಜನ್ ಆರ್ಯ, IPS, ಸಹಾಯಕ ಪೊಲೀಸ್ ಅಧೀಕ್ಷಕರು, ಕೊಪ್ಪ

ಎಎಸ್ಪಿ ಅವರ ಸಂವಹನ ಕೊರತೆ;

ಎಎಸ್ಪಿ ಗುಂಜನ್ ಆರ್ಯ ಮೂಲತಃ ಮಧ್ಯಪ್ರದೇಶ ಮೂಲದವರು. 2018 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ. ಪ್ರಸ್ತುತ ಅವರನ್ನು ಕೊಪ್ಪ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಕಳೆದ ಕೆಲ ವರ್ಷದಿಂದ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕನ್ನಡ ಮಾತನಾಡುತ್ತಾರಾದರೂ, ಭಾಷೆಯ ಮೇಲೆ ಅಷ್ಟಾಗಿ ಹಿಡಿತವಿಲ್ಲ. ಹೀಗಾಗಿ ಸಂವಹನದ ಕೊರತೆ ಇನ್ನಷ್ಟು ವಿವಾದಗಳಿಗೆ ಕಾರಣಮಾಡಿಕೊಟ್ಟಿದೆ.