ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರಾಗಿದ ಅಕ್ಷಯ್ ಎಂ ಹಾಕೆ, IPS ಅವರನ್ನು ಚಿಕ್ಕಮಗಳೂರಿನಿಂದ ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ.

ಚಿಕ್ಕಮಗಳೂರಿನ ನೂತನ ಎಸ್ಪಿಯಾಗಿ ಎಸಿಬಿ ವಿಭಾಗದ ಉಮಾ ಪ್ರಶಾಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಹಿಳಾ ಐಪಿಎಸ್ ಉಮಾ ಪ್ರಶಾಂತ್ ಅವರು ಎಸಿಬಿ ಬೆಂಗಳೂರಿನ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪತಿ ಪ್ರಶಾಂತ್ ಕುಮಾರ್ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಚಿಕ್ಕಮಗಳೂರು ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದ ಅಕ್ಷಯ್ ಹಾಕೆ ಅವರು ವರ್ಗಾವಣೆಗೊಂಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಮಹಿಳಾ ಎಸ್ಪಿ ಉಮಾ ಪ್ರಶಾಂತ್ ನೇಮಕಗೊಂಡಿದ್ದಾರೆ. 

ಈ ಹಿಂದೆ ಉಮಾ ಪ್ರಶಾಂತ್ ಅವರ ನೇತೃತ್ವದ 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಹೊಂದಿದ್ದ ಎಸಿಬಿ ಅಧಿಕಾರಿಗಳ ತಂಡವು ಏಕಕಾಲದಲ್ಲಿ ಬೆಂಗಳೂರಿನ 09 ಕಡೆಗಳಲ್ಲಿ ದಾಳಿ ನಡೆಸಿದ್ದರು

ಖಡಕ್ ಅಧಿಕಾರಿ, ಲೇಡಿ ಸಿಂಗಂ ಎಂದೇ ಖ್ಯಾತಿ :

ಉಮಾ ಪ್ರಶಾಂತ್ ಈ ಹಿಂದೆ ಮಂಗಳೂರು ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಡ್ರಗ್ ಹಾಗೂ ಅಕ್ರಮವಾಗಿ ನಡೆಯುತ್ತಿದ್ದ ಅನೇಕ ಮಾಫಿಯಾಗಳನ್ನು ಮಟ್ಟ ಹಾಕುವಲ್ಲಿ ಉಮಾ ಪ್ರಶಾಂತ್ ನಿರ್ಭಯವಾಗಿ ಕಾರ್ಯ ನಿರ್ವಹಣೆ ಮಾಡಿರುವುದು ಅವರ ಇನ್ನೊಂದು ಹೆಗ್ಗಳಿಕೆ ಹಾಗೂ ಕಾರ್ಯದಕ್ಷತೆಯಾಗಿದೆ.

ಮಂಗಳೂರು ಸಿಟಿಯಲ್ಲಿ ನಡೆಯುತ್ತಿದ್ದ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಖಡಕ್ ಅಧಿಕಾರಿ ಐಪಿಎಸ್ ಉಮಾ ಪ್ರಶಾಂತ್ ಅವರು ಸಫಲರಾಗಿದ್ದರು ಹಾಗೂ ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದರು. ಅಂಕಿ ಅಂಶಗಳ ಪ್ರಕಾರ ಇವರ ಅವಧಿಯಲ್ಲಿ  ಮಂಗಳೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಸಂಪೂರ್ಣ ಕಡಿಮೆಯಿತ್ತು.