ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ನಗರದ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಒಕ್ಕೂಟದ ವತಿಯಿಂದ ನಾಳೆ ಬೆಳಗ್ಗೆ 10 ಗಂಟೆಗೆ ನಮ್ಮ ನಡಿಗೆ ಶಾಂತಿಯ ಕಡೆಗೆ ಎಂಬ ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮದ ಆಯೋಜನೆಗೊಂಡಿದೆ.

ನಮ್ಮ ನಡಿಗೆ ಶಾಂತಿಯ ಕಡೆಗೆ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ವೇದಿಕೆಯ ಪ್ರಮುಖರಾದ ಡಾ. ಧನಂಜಯ ಸರ್ಜಿ ಶಿವಮೊಗ್ಗ ಸುಸಂಸ್ಕೃತರಿರುವ ಸ್ಥಳವಾಗಿದ್ದು, ಮಲೆನಾಡಿನ ಹೆಬ್ಬಾಗಿಲಿನಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ. ಶಾಂತಿ ಬಯಸುವುದು, ಶಾಂತಿ ಸ್ಥಾಪಿಸುವುದು, ಪ್ರೀತಿ ಹಂಚುವುದು ಈ ರ್ಯಾಲಿಯ ಉದ್ದೇಶವಾಗಿದೆ. ಮುಖ್ಯವಾಗಿ ಹಿಂದೂ, ಮುಸಲ್ಮಾನ್, ಕ್ರೈಸ್ತ ಧರ್ಮಗುರುಗಳು ಇದರ ಮುಂದಾಳತ್ವ ವಹಿಸಲಿದ್ದಾರೆ ಎಂದರು.


ಅಂತೆಯೇ ವಿದ್ಯಾರ್ಥಿಗಳು ಶಾಂತಿ ಸಾರುವ ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಈ ಬೃಹತ್ ರ್ಯಾಲಿಯಲ್ಲಿ ಸಾಗಲಿದ್ದು ಇದೊಂದು ಅಪರೂಪದ ಮತ್ತು ಶಾಂತಿಯನ್ನು ಸಾರುವ ಶಾಂತಿಯನ್ನು ಬಯಸುವ ನಡಿಗೆಯಾಗಿದೆ ಎಂದರು.

ಸೆ.3ರಂದು ಬೆಳಗ್ಗೆ 10 ಗಂಟೆಗೆ ನಗರದ ಮೂರು ಕಡೆಯಿಂದ ನಡಿಗೆ ಆರಂಭವಾಲಿದೆ. ಗೋಪಿ ವೃತ್ತ, ಬಸ್ ನಿಲ್ದಾಣ ಮತ್ತು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ನಡಿಗೆ ಆರಂಭವಾಗಿ ಸೈನ್ಸ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. 60ಕ್ಕೂ ಹೆಚ್ಚು ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳು ಈ ನಡಿಗೆ ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತಿವೆ. ವಿವಿಧ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10 ಸಾವಿರ ಮಂದಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಓಪನ್ ಮೈಂಡ್ಸ್ ವರ್ಡ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಕುಮಾರ್ ಅವರು ಮಾಹಿತಿ ನೀಡಿದರು.

ಈ ಸಮಯದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತ ಕುಮಾರ್, ರೈತ ಸಂಘ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಪ್ರಮುಖರಾದ ಪುಷ್ಪಾ, ಅಫ್ತಾಬ್ ಪರ್ವೀಝ್, ರೋಷನ್ ಪಿಂಟೋ, ಸುರೇಶ್ ಅರಸಾಳು, ಡಾ. ಭರತ್, ಹಾಲೇಶಪ್ಪ, ಕೃಷ್ಣಮೂರ್ತಿ ಮೊದಲಾದವರಿದ್ದರು.