ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚ ಗ್ರಾಮಪಂಚಾಯತ್ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಹಡ್ಲುಬೈಲು ಸರ್ವೇ ನಂಬರ್ 101 ರಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ ಜ್ಯೋತಿ ಕೋಂ ರಾಮಪ್ಪ ಎಂಬುವವರ ಮನೆಯನ್ನು ಹೊಸನಗರ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಜೆಸಿಬಿ ಯಂತ್ರದ ಮೂಲಕ ಮನೆ ನೆಲಸಮಗೊಳಿಸಿರುವುದನ್ನು ಖಂಡಿಸಿ ಇಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ಹಡ್ಲುಬೈಲಿನಿಂದ ಆನೆಗದ್ದೆ ಮಾರ್ಗ ಹುಂಚ ನಾಡಕಚೇರಿ ವರೆಗೆ ಸುಮಾರು 6 ಕಿ.ಮೀ ದೂರ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಬರ್ಬರವಾಗಿ ಪತ್ನಿಯನ್ನೇ ಹತ್ಯೆಗೈದ ಪತಿ 


ಗೃಹ ಸಚಿವರ ವಿರುದ್ಧ ಕಿಡಿ :

ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಗೃಹಸಚಿವ ಆಗಿರುವ ಆರಗ ಜ್ಞಾನೇಂದ್ರ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ರಕ್ಷಣೆ ಮಾಡುತ್ತಾರೆ. ಬಡವರಿಗೊಂದು ಕಾನೂನು ತಮ್ಮ ಪಕ್ಷದ ಕಾರ್ಯಕರ್ತರಿಗೊಂದು ಕಾನೂನು ಈ ಕ್ಷೇತ್ರದಲ್ಲಿ ನಡೆಸುತ್ತಿದ್ದಾರೆ ಅಧಿಕಾರಿ ವರ್ಗ ಸಹ ಅವರ ಮಾತು ಕೇಳಿ ಕಳ್ಳ ಖದೀಮರಿಗೆ ರಕ್ಷಣೆ ನೀಡುತ್ತಿದ್ದಾರೆಂದು ತೀವ್ರವಾಗಿ ವಾಗ್ದಾಳಿ ಖಂಡಿಸಿದರು. ಈ ಬಗ್ಗೆ ಬಡಕುಟುಂಬಕ್ಕೆ ನ್ಯಾಯ ಕೊಡಿಸುವವರೆಗೂ ನಾನು ಯಾವುದೇ ಹೋರಾಟ ನಡೆಸಲು ಸಿದ್ದ ಎಂದ ಅವರು ನಗರ ಬಳಿಯಲ್ಲಿ ಇದೇ ರೀತಿಯಲ್ಲಿ ಘಟನೆ ಸಂಭವಿಸಿದಾಗಲೂ ನಾನು ಬಡವರ ಪರ ಹೋರಾಟ ನಡೆಸಿ ನ್ಯಾಯಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ ನಾನು ಎಂದಿಗೂ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಗುಡುಗಿದರು.

ಗುಡ್ಡೆಕೊಪ್ಪದಲ್ಲಿ ಡಿವೈಎಸ್‌ಪಿ ಕಛೇರಿ ತೆರೆಯಲಿ:

ಮಂಗಳೂರಿಗೆ ಮೋದಿ ಬಂದಾಗ ರಾಜ್ಯ ಗೃಹಸಚಿವರು ತಮ್ಮ ಸ್ವಕ್ಷೇತ್ರದಲ್ಲಿ ಇದ್ದರೂ ಇವರಿಗೆ ಹೊರಗೆ ಹೋಗಲು ಭಯವೇನೊ ಎಂಬ ಸಂಶಯ ಭಾಸವಾಗುತ್ತಿದೆ. ಗೃಹ ಸಚಿವರು ಗುಡ್ಡೆಕೊಪ್ಪದಲ್ಲಿಯೇ ಡಿವೈಎಸ್‌ಪಿ ಕಛೇರಿ ಆರಂಭಿಸಿಕೊಳ್ಳಲಿ ಎಂದು ಲೇವಡಿ ಮಾಡಿ ಅಧಿಕಾರಿಗಳು ಅವರ ಅಣತಿಗೆ ಮಣಿಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಿಂದುತ್ವದ ಹೆಸರಿನಲ್ಲಿ ಮುಗ್ದ ಮನಸ್ಸುಗಳನ್ನು ಹಾಳು ಗೆಡವಬೇಡಿ : 

ಹಿಂದುತ್ವದ ಹೆಸರಿನಲ್ಲಿ ಮಕ್ಕಳ ಮುಗ್ದ ಮನಸ್ಸಿನವರನ್ನು ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತವನ್ನು ಮರೆಯದೆ ಕಾರ್ಯಕರ್ತರು ಮತದಾರರನ್ನು ಸಂಘಟಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುವಂತೆ ಕಾರ್ಯಕರ್ತರು ಸಿದ್ದರಾಗಬೇಕು ಎಂದು ಕರೆ ನೀಡಿದರು.

ಇದೊಂದು ಸಾಂಕೇತಿಕ ಪ್ರತಿಭಟನೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಬಡಕುಟುಂಬಸ್ಥರ ಮನೆ ತೆರವುಗೊಳಿಸಿರುವ ನಿರ್ಗತಿಕ ಕುಟುಂಬಕ್ಕೆ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು.