ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಜೂಜಾಟ ಆಡುತ್ತಿದ್ದ 12 ಜನ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದು ಆರೋಪಿಗಳ ಬಳಿಯಿದ್ದ ನಗದನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಚಟ್ಟನಹಳ್ಳಿ ಗ್ರಾಮದ ಗೌರಮ್ಮ ದೇವಸ್ಥಾನದ ಪಕ್ಕದಲ್ಲಿನ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟ ಆಡುತ್ತಿರುವುದರ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಗಳನ್ನು ಪ್ರಭುಕುಮಾರ್, ಶಾಂತಪ್ಪ, ರುದ್ರೇಶ, ಬಸವರಾಜ್, ಲೋಕೇಶ್, ಸುಂದರೇಶ್, ಮೂರ್ತಿ, ಗಿರೀಶ್, ಕಲ್ಲೇಶಪ್ಪ, ನಿಂಗಪ್ಪ, ಶ್ರೀಧರ್, ಮತ್ತು ಗುರು ಎಂದು ಗುರುತಿಸಲಾಗಿದ್ದು ಬಂಧಿತರಿಂದ 51,080 ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಈ ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.