ಚಿಕ್ಕಮಗಳೂರು:

ಮಳೆಹಾನಿ ಹಾಗೂ ಪರಿಹಾರದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು :

ಕಳೆದ ಮೂರು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ 398 ಕೋಟಿ ರೂಪಾಯಿ ಹಣ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೆಶ್ ಮಾಹಿತಿ ನೀಡಿದರು. ಈ ಕುರಿತಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾಹಿತಿ ನೀಡಿದ ಅವರು ವಾಡಿಕೆಗಿಂತ ಈ ಬಾರಿ ಅತ್ಯಧಿಕವಾಗಿ ಹೆಚ್ಚಿನ ಮಳೆಯಾಗಿದ್ದು ಜಿಲ್ಲೆಯ ಹಲವೆಡೆ ವಿವಿಧ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ. ಹಾನಿಯಾಗಿರುವುದರ ಕುರಿತು ಈಗಾಗಲೇ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ತರಿಸಿಕೊಂಡಿದ್ದು ಸರ್ಕಾರಕ್ಕೆ ಕಳುಹಿಸಲಾಗಿದೆ, ಮನೆಗಳ ಹಾನಿ ಪ್ರಮಾಣ 18 ಕೋಟಿ ಎಂದು ಅಂದಾಜಿಸಲಾಗಿದ್ದು ಸರ್ಕಾರದಿಂದ ಬರುವ ಹಣವನ್ನು ಕೂಡಲೇ ಫಲಾನುಭವಿಗಳಿಗೆ ದೊರಕಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಹಾನಿಗೀಡಾದ 90 ಪ್ರತಿಶತ ಮನೆಗಳಿಗೆ ಮೊದಲ ಹಂತದ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಮುಂದಿನ ಹಣ ಬಿಡುಗಡೆ ಮನೆ ಕಟ್ಟುವ ಹಂತದ ಪ್ರಗತಿಯ ಮೇಲೆ ನೇರವಾಗಿ ಪಾವತಿಯಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದರು.

ನಾಳೆ ಕಾಡಾನೆ ಸಂತ್ರಸ್ತರ ಹೋರಾಟ: 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಆನೆ ದಾಳಿ ಹೆಚ್ಚಿದ್ದು ಇಂದೂ ಸಹ ತಾಲೂಕಿನ ಊರುಬಗೆಯಲ್ಲಿ ಅರ್ಜುನ್ ಎಂಬ ಕಾರ್ಮಿಕನನ್ನು ಕಾಡಾನೆ ತುಳಿದು ಸಾಯಿಸಿದ್ದು ಇದರ ಸಲುವಾಗಿ ಹಾಗೂ ಈ ಘಟನೆ ಮರುಕಳಿಸದಂತೆ ಅಧಿಕಾರಿಗಳು ತಡೆಯಬೇಕೆಂದು ಆಗ್ರಹಿಸಿ ನಾಳೆ ದಿನಾಂಕ 09.09.2022 ನೇ ಶುಕ್ರವಾರ ಮೂಡಿಗೆರೆಯ ಅರಣ್ಯ ಇಲಾಖೆಯ ಬಳಿ ಮೃತ ವ್ಯಕ್ತಿಯ ಶವದೊಂದಿಗೆ ಬೃಹತ್ ಧರಣಿಯನ್ನು ಕಾಡಾನೆ ಸಂತ್ರಸ್ತರು ಹಾಗೂ ಸ್ಥಳೀಯರು ಹಮ್ಮಿಕೊಂಡಿದ್ದಾರೆ.

ಮುಂದುವರೆದ ಮಳೆ; ಕೃಷಿಕ ಕಂಗಾಲು :

ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು ಆಲ್ದೂರು ಬಳಿ ಹವ್ವಳ್ಳಿ ಬಳಿ ಹುಲಿ ಹಳ್ಳ ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರು ಸಮೀಪದ ಹೆದ್ದಾರಿ ಬದಿಯಲ್ಲಿ ಮರವೊಂದು ನೆಲಕ್ಕುರುಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರವನ್ನು ತೆರವುಗೊಳಿಸಿದರು.ಅಜ್ಜಂಪುರ, ಹೊಸಕೆರೆ, ಮೇಗರಮಕ್ಕಿ, ನರಸಿಂಹರಾಜಪುರ, ಬುಕ್ಕಾಂಬುದಿ, ಕೊಟ್ಟಿಗೆಹಾರ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕಳಸ ಸಮೀಪದ ಗ್ರಾಮವೊಂದರ ಗದ್ದೆಯ ಮೇಲೆ ಮಳೆ ನೀರು ಉಕ್ಕಿ ಹರಿದಿದ್ದು, ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಶಿವನಿ ಅನುವನಹಳ್ಳಿ ನಾರಾಯಣಪುರ ಸೇತವೆ ಮೇಲೆ ಮಳೆನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಳೆಯ ಆರ್ಭಟದಿಂದ ಅಂತ್ಯ ಸಂಸ್ಕಾರಕ್ಕೂ ಅಡ್ಡಿ: ಎರಡು ದಿನಗಳ ನಂತರ ಕುಟುಂಬಸ್ಥರಿಂದ ಅಂತ್ಯಕ್ರಿಯೆ :

ಮೂರು ದಿನಗಳಿಂದ ಕಡೂರಿನ ಚಿಕ್ಕದೇವನೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಸ್ಮಶಾನದ ಜಾಗ ಜಲಾವೃತಗೊಂಡಿತ್ತು. ಇದರಿಂದ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಕುಟುಂಬ ಸದಸ್ಯರು ಪರದಾಡಿದ್ದರು. ಪರ್ಯಾಯ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಮೃತದೇಹವನ್ನು ಮನೆಯಲ್ಲೇ ಇಟ್ಟಿದ್ದರು ಎನ್ನಲಾಗಿದೆ. ಎರಡು ದಿನದ ಬಳಿಕ ಸ್ಮಶಾನದ ಜಾಗದಲ್ಲಿದ್ದ ನೀರು ಸ್ವಲ್ಪ ಕಡಿಮೆಯಾದ ಬಳಿಕವೇ ಗ್ರಾಮಸ್ಥರು ನಿನ್ನೆ (ಮಂಗಳವಾರ) ಸಂಜೆ ವೇಳೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು :

ಮಳೆಹಾನಿ ಪ್ರದೇಶಗಳಿಗೆ ಕೇಂದ್ರದ ಅಧಿಕಾರಿಗಳ ಭೇಟಿ :

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ನೇತೃತ್ವದತಂಡ ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕಾರಾದ ಮಹೇಶ್ ಕುಮಾರ್, ಕೇಂದ್ರಇಂಧನ ಸಚಿವಾಲಯದ ಸಹಾಯಕ ನಿರ್ದೇಶಕರಾದ ಭವ್ಯ ಪಾಂಡೆ ತಂಡವು ಜಿಲ್ಲೆಯ ಭೂಕೂಸಿತ , ಬೆಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಮಾಹಿತಿ ಪಡೆದರು ಮಡಿಕೇರಿ ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂಕುಸಿತ , ಕಾಫಿ ಬೆಳೆ ಹಾನಿ , ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ , ಕೊಯನಾಡು ಶಾಲೆ ಬಳಿ ಭೂಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ವೀಕ್ಷಣೆ ಮಾಡಿ ಈ ಕುರಿತು ಮಾಹಿತಿ ಕಲೆಹಾಕಿದರು.

ಐದು ವರ್ಷಗಳ ನಂತರ ಮತ್ತೆ ಆರಂಭವಾದ ಹಾಕಿ ಉತ್ಸವ:

ಕೊಡವ ಕುಟುಂಬಗಳ ನಡುವಿನ ಅತ್ಯಂತ ಪ್ರತಿಷ್ಠಿತ ಹಾಕಿ ಉತ್ಸವ ಎಂದೆ ಪರಿಗಣಿತವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ಬರೋಬ್ಬರಿ 5 ವರ್ಷಗಳ ನಂತರ ಮತ್ತೆ ನಡೆಯಲಿದೆ. ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ 3 ಕ್ರೀಡಾಂಗಣಗಳಲ್ಲಿ 2023ರ ಫೆಬ್ರುವರಿಯಲ್ಲಿ ಅಪ್ಪಚಟ್ಟೋಳಂಡ ಕುಟುಂಬವು ಈ ಹಾಕಿ ಉತ್ಸವವನ್ನು ಆಯೋಜಿಸಲಿದೆ. ಒಟ್ಟು 22 ವರ್ಷಗಳ ಕಾಲ ನಿರಂತರವಾಗಿ ನಡೆದಿದ್ದ ಈ ಹಾಕಿ ಉತ್ಸವ 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು. ನಂತರ, 2019ರಲ್ಲೂ ವಿಕೋಪ ಮುಂದುವರಿದಿತ್ತು. 2020 ಮತ್ತು 2021ರಲ್ಲಿ ಕೋವಿಡ್‌, ಲಾಕ್‌ಡೌನ್‌ಗಳಿಂದಾಗಿ ಕ್ರೀಡೋತ್ಸವ ಆಯೋಜನೆಯಾಗಿರಲಿಲ್ಲ. ಈಗ ಸದ್ಯ, ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಮತ್ತೆ ಹಾಕಿ ಉತ್ಸವ ಹಿಂದಿನ ವೈಭವದಲ್ಲೇ ನಡೆಯುವುದು ಬಹುತೇಕ ಖಚಿತ ಎನಿಸಿದೆ. ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪಚಟ್ಟೋಳಂಡ ಕುಟುಂಬದ ಕೌಟುಂಬಿಕ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮನುಮುತ್ತಪ್ಪ, ಕೊಡವ ಹಾಕಿ ಅಕಾಡೆಮಿಯು ಹಾಕಿ ಉತ್ಸವದ ಧ್ವಜವನ್ನು ಈಗಾಗಲೇ ಅಪ್ಪಚಟ್ಟೋಳಂಡ ಕುಟುಂಬಕ್ಕೆ ಹಸ್ತಾಂತರಿಸಿದೆ. 2023ರ ಫೆ. 20ರಿಂದ ಮಾರ್ಚ್ 6ರವರೆಗೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಹಾಕಿ ಉತ್ಸವವನ್ನು ನಡೆಸಲಾಗುವುದು ಎಂದು ಹೇಳಿದರು.

ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ವಸತಿ ಗೃಹದಲ್ಲಿ ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮಡಿಕೇರಿಯ ಹಳೇ ಬಸ್ ನಿಲ್ದಾಣದ ವಸತಿಗೃಹದಲ್ಲಿ ಮಂಗಳೂರಿನ ಬಜ್ಪೆ ಮೂಲದ ಶಿವಾನಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿವಾನಂದ್ ಅವರು ಮಡಿಕೇರಿಯ ವಸತಿ ಗೃಹದಲ್ಲಿ ತಂಗಿದ್ದರು. ಈ ಮಧ್ಯೆಯೇ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರಠಾಣಾ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಶಿವಾನಂದ್ ಸಾವಿನ ಕುರಿತು ಕುಟುಂಬಸ್ಥರು ನೋವನ್ನು ವ್ಯಕ್ತಪಡಿಸಿದ್ದಾರೆ.

ಹಾಸನ:

ಭಾರೀ ಮಳೆಗೆ ಬೆಳೆಹಾನಿ:

ರಾಜ್ಯದೆಲ್ಲೆಡೆ ರಣ ಮಳೆಗೆ ಜನ ಜೀವನವೇ ತತ್ತರವಾಗಿದೆ. ಹಾಸನ ಜಿಲ್ಲೆಯ ಜನರು ಇದೀಗ ತತ್ತರಿಸಿ ಹೋಗಿದ್ದಾರೆ ಬೆಳೆದ ಬೆಳೆಗಳೆಲ್ಲಾ ನೀರು ಪಾಲಾಗಿದೆ. ಅನೇಕ ಬೆಳೆಗಳು ನೀರುಪಾಲಾಗಿದೆ. ಹೂಕೋಸು ಕ್ಯಾಲಿ ಫ್ಲವರ್ ಹೀಗೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿದೆ. ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪರಿಹಾರ ಕ್ರಮಕ್ಕಾಗಿ ರೈತರು ಸರಕಾರದ ಮೊರೆ ಹೋಗಿದ್ದಾರೆ.

ಟೈಲರ್ ಕ್ಷೇಮನಿಧಿ ಸ್ಥಾಪನೆಗೆ ಒತ್ತಾಯ :

ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ ಆ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಸರಕಾರದ ಮುಂದಿಡಲಾಗಿದೆ ಎಂದು ಕರ್ನಾಟಕ ಸ್ಟೇಟ್ ಟೈರ‍್ಸ್ ಅಸೋಸಿಯೇಷನ್ ನಿಂದ ಅಪರ ಜಿಲ್ಲಾಧಿಕಾರಿ ಕವಿತಾರಾಜರಾಂ ಅವರಿಗೆ ಮನವಿ ಮಾಡಲಾಯಿತು.ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಎಂಬ ರಾಜ್ಯ ಮಟ್ಟದ ಸಂಘಟನೆಯನ್ನು 13 ವರ್ಷಗಳ ಹಿಂದೆ ಸ್ಥಾಪಿಸಿದ್ದು, ರಾಜ್ಯಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಸ್ತಿçà - ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮಾನಿಧಿ ಮಂಡಳಿಯನ್ನು ರಚಿಸುವಂತೆ ಕಳೆದ 22 ವರ್ಷಗಳಿಂದ ಮನವಿ ಹಾಗೂ ಶಾಂತ ರೀತಿಯ ಚಳುವಳಿಗಳ ವಾಂಖೇನ ರಾಜ್ಯ ಸರಕಾರವನ್ನು ಒತ್ತಾಯಿಸುತ್ತ ಬಂದಿರುತ್ತೇವೆ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರಕಾರವು ಟೈಬರ್ ಕ್ಷೇಮನಿಧಿ ಮಂಡಳಿ ರಚಿಸುವ ಮೂಲಕ ಅಗತ್ಯದ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಮುಂದೆ ಒತ್ತಾಯಿಸುತ್ತಿದ್ದೇವೆ ಎಂದರು. ಮುಖ್ಯವಾದ ಬೇಡಿಕೆಗಳೆಂದರೇ ರಾಜ್ಯಾದ್ಯಂತ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿರುವ ಟೈಲರ್ ವೃತ್ತಿಬಾಂಧವರಿಗೆ ಕೂಡಲೇ ಟೈರ‍್ಸ್ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸಬೇಕು. ಭವಿಷ್ಯನಿಧಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಆರೋಗ್ಯ ವಿಮೆಯನ್ನು ಜಾರಿಗೊಳಿಸಲಿ. ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲಾ ಎನ್.ಪಿ.ಎಸ್. ಲೈಟ್ ಫಲಾನುಭವಿಗಳ ನಿವೃತ್ತಿ ವೇತನ ಘೋಷಣೆ ಮಾಡಬೇಕು ಎಂದ ಅವರು, ಮಾಸಿಕ ರೂ . 3,000 ರವರೆಗೆ ನಿವೃತ್ತಿ ವೇತನ ನೀಡಬೇಕು ಒತ್ತಾಯಿಸಿದರು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ವಿವಾಹಧನ ನೀಡಬೇಕು. ಮಹಿಳಾ ಹೂಲಿಗೆ ಕೆಲಸಗಾರರಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡುವುದು, ಹೊಲಿಗೆ ಕೆಲಸಗಾರರ ಸ್ವಂತ ವಾಸಕ್ಕಾಗಿ ಮನೆ ಕೊಂಡುಕೊಳ್ಳಲು ಮತ್ತು ಮನೆ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಧನಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು ಹಾಗೂ ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು ಎಂದು ಆಗ್ರಹಿಸಿ ಮನವಿ ಮಾಡಿದರು.

ಹ್ಯಾಂಡ್‌ಬಾಲ್ ಚಾಂಪಿಯನ್‌ ಶಿಪ್‌ಗೆ ಆಯ್ಕೆ:

51ನೇ ಪುರುಷರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್-2022, ಸೆಪ್ಟೆಂಬರ್ 7 ರಿಂದ 11 ರವರೆಗೆ ಲಕ್ನೋದ ಕೆ.ಡಿ.ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲ್ಲಿದ್ದು, ಜಿಲ್ಲೆಯ ಅಕ್ಷಯ್ ಸುಬ್ರಹ್ಮಣ್ಯ ಅವರು ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಅಕ್ಷಯ್ ಸುಬ್ರಹ್ಮಣ್ಯ ಅವರಿಗೆ ಹಾಸನ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಅಭಿನಂದನೆಸಲ್ಲಿಸಿ ಗೆದ್ದು ಬನ್ನಿ ಎಂದು ಶುಭಾಶಯ ಕೋರಿದ್ದಾರೆ.


ಶಿವಮೊಗ್ಗ:

ಬಿಗಿಪೊಲೀಸ್ ಬಂದೋಬಸ್ತ್ ನಡುವೆ ಅದ್ಧೂರಿ ಗಣೇಶೋತ್ಸವ :

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಭದ್ರಾವತಿಯ ಹಿಂದು ಮಹಾಸಭಾ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಸಂಗಮೇಶ್ವರ್‌ ಸೇರಿದಂತೆ ಹಲವು ಗಣ್ಯರು, ಹಿಂದುಪರ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗಣೇಶ ಮೆರವಣಿಗೆಯಲ್ಲಿ ನಟ ಪುನೀತ್ ರಾಜಕುಮಾರ್‌ ಮತ್ತು ಹಿಂದು ಹರ್ಷ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ ಮತ್ತು ಭದ್ರಾವತಿ ಶಾಸಕ ಸಂಗಮೇಶ್ವರ್​ ಭಾಗಿಯಾಗಿದ್ದರು. ಹೊಸ ಮನೆ ಮುಖ್ಯರಸ್ತೆ ತಮಿಳು ಶಾಲೆ ಬಳಿ ಶಾಸಕ ಬಿ.ಕೆ. ಸಂಗಮೇಶ್ವರ್ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ನೃತ್ಯ, ಕೋಲಾಟ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಿ ಮೆರವಣಿಗೆಗೆ ಮೆರುಗು ನೀಡಿದವು. ಮೆರವಣಿಯುದ್ದಕ್ಕೂ ಭಕ್ತರಿಂದ, ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ, ಮೈಸೂರ್ ಪಾಕ್, ಲಾಡು ವಿತರಣೆ ನಡೆಯಿತು. ಜತೆಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಭಾರತ್ ಜೋಡೋ ಯಾತ್ರೆಯು ಬಾಂಗ್ಲಾ ಹಾಗೂ ಪಾಕಿಸ್ತಾನವನ್ನು ಜೋಡಿಸಲಿ: ಈಶ್ವರಪ್ಪ

ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಯಾತ್ರೆ ಶುರು ಮಾಡಿರುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ, ದೇಶವನ್ನು ತುಂಡು ಮಾಡಿದವರೇ ಅವರು ಹೀಗೆಂದು ಗೇಲಿ ಮಾಡಿದ್ದಾರೆ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ  ಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಿದ ಸಾವಿರಾರು ಜೀವಗಳಿಗೆ ಬೆಲೆಯೇ ಇಲ್ಲ ಎನ್ನುವ ಹಾಗೆ ಅಖಂಡ ಭಾರತವನ್ನು ಮೂರು ತುಂಡು ಮಾಡುವ ಪಾಪದ ಕೆಲಸ ಮಾಡಿದ್ದು ಕಾಂಗ್ರೆಸ್‌. ಅವರು ಭಾರತಾಂಬೆಯನ್ನೇ ಸೀಳಿದ್ದರು ಎಂದು ಶಿವಮೊಗ್ಗದಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ ಹೇಳಿದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದು ಅವರು ಹೇಳಬೇಕು. ಪಾಕಿಸ್ತಾನವನ್ನು ವಾಪಸ್ ತರುತ್ತೇವೆ, ಬಾಂಗ್ಲಾದೇಶವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ತಿಳಿಸಬೇಕು. ಆಗ ಮಾತ್ರ ಇದು ನಿಜವಾದ ಭಾರತ್‌ ಜೋಡೋ ಯಾತ್ರೆಯಾಗುತ್ತದೆʼ ಎಂದು ಈಶ್ವರಪ್ಪ ಹೇಳಿದರು.