ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಿತಾಣ, ಕಾಫಿ ಎಸ್ಟೇಟ್ ಗಳಿಂದ ಕೂಡಿದ ಕೊಡಗು ಜಿಲ್ಲೆಯಲ್ಲಿ ಇಂದಿಗೂ ತಲತಲಾಂತರಗಳಿಂದ ಸ್ವಂತ ಸೂರಿಲ್ಲದೆ, ಇತ್ತ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ಅತ್ಯಂತ ಕಠಿಣವಾದ ಬದುಕು ದೂಡುತ್ತಿರುವ ಜನರು ಆಸರೆಗಾಗಿ, ಅಗತ್ಯ ಸೌಲಭ್ಯಕ್ಕಾಗಿ ಸರ್ಕಾರವನ್ನು ಕೋರಿದ್ದಾರೆ. 

ಆಶ್ರಯಕ್ಕಾಗಿ ಟಾರ್ಪಲ್ ಹೊದಿಸಿ ನಿರ್ಮಾಣ ಮಾಡಿದ ಗುಡಿಸಲೇ ಇವರ ಪಾಲಿಗೆ ಮನೆಗಳು. ವಿದ್ಯುತ್ ಸೌಲಭ್ಯವಿಲ್ಲದೆ ಸಂಪೂರ್ಣ ಕತ್ತಲಲ್ಲಿ ಮುಳುಗಿದ 59 ಕುಟುಂಬಗಳು. ಅತ್ಯಂತ ಕೊಳಚೆಯಂತ ಕಲುಷಿತ ನೀರೇ ಇವರಿಗೆ ಜೀವಜಲ. ಇಂತಹ ಅತೀ ಶೋಚಯನೀಯ ಬದುಕು ದೂಡುತ್ತಿರುವ ಈ ಕುಟುಂಬಗಳು ಇರುವುದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ.

ಇದನ್ನೂ ಓದಿ: ಶಾಸಕ M.P ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ


ಇವರೆಲ್ಲ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸಮಯದಲ್ಲಿ ನಮಗೂ ಸ್ವಂತ ಸೂರು ಬೇಕು ಎಂದು ಹೋರಾಟ ಆರಂಭಿಸಿದ್ದರು. ಆದರೆ ಜಿಲ್ಲಾಡಳಿತ ಇವರನ್ನ ಮನವೊಲಿಸಿ ನಿಮಗೆ ಆದಷ್ಟು ಬೇಗ ಮನೆ ಕೊಡಿಸುವುದಾಗಿ ಹಿಂದಕ್ಕೆ ಕಳುಹಿಸಿತ್ತು.

ಹೀಗೆ ದಿಡ್ಡಳ್ಳಿ ಹೋರಾಟದಿಂದ ಹಿಂದೆ ಬಂದವರೆ ಇಂದಿಗೂ ಟಾರ್ಪಲ್ ಕಟ್ಟಿಕೊಂಡು, ಕನಿಷ್ಠ ಶುದ್ಧ ಕುಡಿಯುವ ನೀರೂ ಇಲ್ಲದೆ ಪರದಾಡುತ್ತಿದ್ದಾರೆ. ಅಷ್ಟಕ್ಕೂ ಇವರೆಲ್ಲಾ ಈ ಹೋರಾಟಕ್ಕೂ ಮುಂಚೆ ತಮ್ಮ ತಾತ ಮುತ್ತಾತನ ಕಾಲದಿಂದಲೂ ಕಾಫಿ ಎಸ್ಟೇಟ್‍ಗಳಲ್ಲಿ ಇರುವ ಲೈನ್ ಮನೆಗಳಲ್ಲಿ ಬದುಕಿದ್ದವರು. ಲೈನ್ ಮನೆಗಳಲ್ಲಿ ದುಡಿಯಲು ಶಕ್ತಿ ಇರುವವರೆಗೆ ಮಾತ್ರ ಜೀವನ ಮಾಡಬಹುದು. ಆದರೆ ದುಡಿಯುವ ಶಕ್ತಿ ಕಳೆದುಕೊಳ್ಳುತ್ತಿದ್ದಂತೆ ಬಾಡಿಗೆ ಕಟ್ಟಲು ಸಾಧ್ಯವಾಗದೇ, ಮನೆಯಿಂದ ಹೊರಹೋಗಬೇಕಾದ ಸ್ಥಿತಿಯಲ್ಲಿ ಈ ಬಡವರ್ಗದ ಕುಟುಂಬಗಳು ಇಂದು ಟಾರ್ಪಲ್ ಹೊದಿಸಿದ ಶೆಡ್ ನಲ್ಲಿ ಅತ್ಯಂತ ಕಷ್ಟದ ಜೀವನ ದೂಡುತ್ತಿದೆ.

ಈ ಕುಟುಂಬಗಳು ದಿಡ್ಡಳ್ಳಿ ಆದಿವಾಸಿಗಳ ಹೋರಾಟದೊಂದಿಗೆ ಕೈಜೋಡಿಸಿ ಸ್ವಂತ ಮನೆಗಳಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಜಿಲ್ಲಾಡಳಿತದ ಮಾತಿಗೆ ಗೌರವಕೊಟ್ಟು ಅವರ ಮಾತು ಕೇಳಿಕೊಂಡು ಹೋರಾಟದಿಂದ ಹಿಂದೆ ಸರಿದ ಆದಿವಾಸಿಗಳು ಬಾರಿಕಾಡು ಪೈಸಾರಿ ಜಾಗದಲ್ಲಿ ತಾತ್ಕಾಲಿಕ ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಆರಂಭಿಸಿದ ಪ್ರತಿಫಲ ಇಂದು ಹೀನಾಯ ಬದುಕು ದೂಡುತ್ತಿದ್ದಾರೆ.

ಕೇವಾಲ ಭರವಸೆ, ಆಶ್ವಾಸನೆಗಳನ್ನು ಹೊಂದಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಹೊಂದದೇ ಕ್ಲಿಷ್ಟಕರವಾದ ಜೀವನ ನಡೆಸುತ್ತಿರುವ ಈ ಕುಟುಂಬಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅಗತ್ಯ ಪರಿಹಾರ ಒದಗಿಸಿ ಸೂರುಗಳನ್ನು ನಿರ್ಮಾಣ ಮಾಡಿಕೊಟ್ಟು ಈ ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಆಗ್ರಹ ಇಲ್ಲಿನ ಸಂತ್ರಸ್ತರದ್ದು.