ಚಿಕ್ಕಮಗಳೂರು:
ದಲಿತರ ಜಮೀನು ಕಬಳಿಕೆಗೆ ಯತ್ನ; ಪ್ರಗತಿಪರರಿಂದ ಆರೋಪ :
ಮೇಲ್ವರ್ಗದ ಸವರ್ಣೀಯ ಪ್ರಭಾವಿ ವ್ಯಕ್ತಿಯೊಬ್ಬರು ದಲಿತರಿಗೆ ಸೇರಿದ ಜಮೀನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದಲ್ಲದೇ ಗ್ರಾಮ ಸಂಪರ್ಕದ ರಸ್ತೆಗೆ ಖಾಸಗಿ ರಸ್ತೆ ಎಂದು ನಾಮಫಲಕ ಹಾಕಿ ದಲಿತರಿಗೆ ತಿರುಗಾಡಲೂ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ಕಳಸ ತಾಲೂಕಿನ ಕಲ್ಲುಕುಡಿಗೆ ಗ್ರಾಮದ ದಲಿತರು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ಮುಖಂಡರು, ಸಂತ್ರಸ್ತರು, ಕಳಸ ತಾಲೂಕು ವ್ಯಾಪ್ತಿಯ ತೋಟದೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ತಲಗೋಡು ಗ್ರಾಮ ಸಮೀಪದ ಕಲ್ಲುಕುಡಿಗೆ ಗ್ರಾಮದ ಸ.ನಂ.81ರಲ್ಲಿನ ಸರಕಾರಿ ಜಾಗದಲ್ಲಿ ರಾಘವ, ವಿದ್ಯಾನಂದ, ರಾಮಯ್ಯ ಎಂಬ ಮೂರು ದಲಿತ ಕುಟುಂಬಗಳು ಜಮೀನು ಹಾಗೂ ವಾಸದ ಮನೆಗಳನ್ನು ಹೊಂದಿದ್ದು, ಈ ಜಮೀನು ಹಾಗೂ ವಾಸದ ಮನೆಗಳಿಗೆ ಸರಕಾರದಿಂದ ಹಕ್ಕುಪತ್ರಗಳನ್ನೂ ನೀಡಲಾಗಿದೆ, ಆದರೆ ಗ್ರಾಮದ ಭೂಮಾಲೀಕರಾಗಿರುವ ಕೆ.ಸಿ ನಾಗೇಶ್‍ಭಟ್, ಸುಬ್ರಹ್ಮಣ್ಯ ಭಟ್ ಎಂಬವರು ಸರ್ವೇ ಇಲಾಖೆಯ ವ್ಯಕ್ತಿಯೊಬ್ಬರನ್ನು ಕರೆ ತಂದು ದಲಿತರು ವಾಸವಾಗಿರುವ ಜಾಗವನ್ನು ದಬ್ಬಾಳಿಕೆ ಮೂಲಕ ಸರ್ವೆ ಮಾಡಿ ಜಾಗದ ಸರ್ವೆ ನಂಬರ್ ಅನ್ನು ಬದಲಾಯಿಸಿದ್ದಾರೆ. ಸದ್ಯ ಈ ದಲಿತ ಕುಟುಂಬಗಳಿಗೆ ಸೇರಿರುವ ಜಾಗ ಬೇರೆ ಸರ್ವೆ ನಂಬರ್ ನಲ್ಲಿದ್ದು, ಹಾಲಿ ಇರುವ ಜಾಗವನ್ನು ಖುಲ್ಲಾ ಮಾಡಬೇಕೆಂದು ಒಕ್ಕಲೆಬ್ಬಿಸಲು ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಶೃಂಗೇರಿಯಲ್ಲಿ ನಡೆದ ಬಿಜೆಪಿ ಮಂಡಲ ಸಭೆ :
ಇಂದು ಶೃಂಗೇರಿಯ ಚಪ್ಪರದ ಆಂಜನೇಯ ದೇವಸ್ಥಾನದ ಹಿಂಭಾಗದ ಹಾಲ್ ನಲ್ಲಿ ಬಿಜೆಪಿ ಮಂಡಲದ ಸಭೆ ನಡೆಯಿತು. ಈ ಮಾಸಿಕ ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ಹಾಜರಿದ್ದು ಮಂಡಲದ ಪ್ರಮುಖರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡಿ ಪಕ್ಷ ಬಲವರ್ಧನೆಯ ಕುರಿತು ಚರ್ಚಿಸಿದರು.
ದಾಖಲೆಯ ಮಳೆಗೆ ತತ್ತರಿಸಿದ ಜನತೆ :
ಚಿಕ್ಕಮಗಳೂರಿನ ಇತಿಹಾಸದಲ್ಲೇ ದಾಖಲೆ ಎಂಬಂತೆ ಒಂದೇ ಗಂಟೆಯಲ್ಲಿ ಅತ್ಯಧಿಕವಾಗಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಸಾರಗೋಡು, ಹುಯಿಗೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಸಾರಗೋಡಿನಲ್ಲಿ ಸಹ ಮಳೆಯಾಗಿದೆ. ಒಂದು ಗಂಟೆಯಲ್ಲಿ 200 ಮಿ.ಮೀ ಮಳೆಯಾಗಿದ್ದು ದಾಖಲೆಯನ್ನೇ ನಿರ್ಮಿಸಿದೆ. ಇದರೊಂದಿಗೆ ರೈತರಿಗೆ ತೀವ್ರತರಹದ ಸಂಕಷ್ಟವನ್ನು ಸಹ ಮಳೆ ತಂದೊಡ್ಡಿದೆ. ಭಾರೀ ಮಳೆಯಿಂದಾಗಿ ರೈತರು ಕಂಗಾಲಾಗಿದ್ದು ಬೆಳೆ ನಷ್ಟ ಹೊಂದುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ. ಮಳೆಯ ನೀರು ರಸ್ತೆಯ ಮೇಲೆಲ್ಲಾ ರಭಸವಾಗಿ ಹರಿಯುತ್ತಿದ್ದರೂ ಕೂಡ ಅಗತ್ಯವಾಗಿ ತೆರಳಬೇಕಾದ ಕಾರಣದಿಂದಾಗಿ ಹರಿಯುವ ನೀರನ್ನು ಲೆಕ್ಕಿಸದೇ ಅನೇಕರು ರಸ್ತೆಯನ್ನು ದಾಟುವ ದೃಶ್ಯಗಳು ಸಹ ಕಂಡುಬಂದವು.
ಅಂಬೇಡ್ಕರ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಾತನ ಬಂಧನ :
ಅಂಬೇಡ್ಕರ್ ಭಾವಚಿತ್ರ ಹಾಗೂ ಸಕಲೇಶಪುರದ ದಲಿತ ಸಂಘಟನೆಗಳ ಪ್ರತಿಭಟನೆಯ ಫೋಟೋಗಳನ್ನು ಬಳಸಿ ಅಶ್ಲೀಲ ಹಾಡಿನ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಗೋಸಾಗಣೆ ಮಾಡುತ್ತಿದ್ದ ದಲಿತ ವ್ಯಕ್ತಿಯನ್ನು ಅಡ್ಡ ಹಾಕಿದ್ದ ಬಜರಂಗದಳದ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದರು. ಈ ಘಟನೆಯನ್ನು ಖಂಡಿಸಿ ಸಕಲೇಶಪುರದಲ್ಲಿ ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಕೆಲವು ಚಿತ್ರಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಬಳಸಿದ ಹಿನ್ನೆಲೆಯಲ್ಲಿ ಅಶ್ಲೀಲ ಹಾಡಿನ ವಿಡಿಯೋ ಸೃಷ್ಟಿಸಿ ಅದನ್ನು ಸಿಕೆಎಂ ಪವರ್ ಆಫ್ ಹಿಂದೂ ಎಂಬ ಇನ್‍ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ದಲಿತಪರ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಭಾವಚಿತ್ರ ಹಾಗೂ ದಲಿತ ಹೋರಾಟಗಾರರನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಎಸ್ಪಿ ಉಮಾಪ್ರಶಾಂತ್ ಅವರಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಪ್ರಸ್ತುತ ಬೆಂಗಳೂರು ಮೂಲದ ರಂಜಿತ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ:
ಪಾಂಚಜನ್ಯ ಗಣೇಶನ ಅದ್ಧೂರಿ ಶೋಭಾಯಾತ್ರೆ
ಹಾಸನ ನಗರದ ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆ ಎಲ್ಲರ ಗಮನ ಸೆಳೆಯಿತು. ನಗರದ ಕಲಾಭವನದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದರು. ಭಾರೀ ಮೆರವಣಿಗೆಯಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದರು. ಹತ್ತಾರು ಕಲಾ ತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಗಣೇಶ ಮೂರ್ತಿಯೊಂದಿಗೆ ಕಲಾಭವನ ಆವರಣದಿಂದ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಳೆದ 12 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೃಹತ್ ಶೋಭಾಯಾತ್ರೆ ಜರುಗಿದ್ದರಿಂದ ನಗರದ ಬಹುತೇಕ ಭಾಗ ಕೇಸರಿಮಯವಾಗಿ ಬದಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶೋಭಾಯಾತ್ರೆ ಸಾಗುವ ಮಾರ್ಗ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದಶಕದ ನಂತರ ಭರ್ತಿಯಾದ ಅರಸೀಕೆರೆ :
ಬರೋಬ್ಬರಿ ಒಂದು ದಶಕದ ಬಳಿಕ ಅರಸೀಕೆರೆ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ಕೋಡಿ ಬೀಳುವ ಹಂತಕ್ಕೆ ತಲುಪಿದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಹೊಯ್ಸಳರ ರಾಣಿ ಈ ಕೆರೆ ಕಟ್ಟಿಸಿದರು ಎಂಬ ಇತಿಹಾಸ ಇರುವುದರಿಂದ ಇದಕ್ಕೆ ಅರಸೀ ಕೆರೆ ಎಂದು ನಾಮಕರಣ ಮಾಡಲಾಗಿದೆ. ಮುಂದೆ ಇದೇ ಊರ ಹೆಸರಾಗಿಯೂ ಚಾಲ್ತಿಗೆ ಬಂದಿದೆ ಎಂಬ ಮಾತಿದೆ. ಬರೋಬ್ಬರಿ 442 ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶ ಹೊಂದಿರುವ ಈ ಕೆರೆ, ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಆದರೆ ಕೆರೆ ತುಂಬಲು ನದಿ ಮೂಲ ಹಾಗೂ ಗುಡ್ಡಗಾಡುಗಳ ಸಂಪರ್ಕ ಇಲ್ಲದೆ ಹೋದರೂ ಹಾರನಹಳ್ಳಿ, ತಳ್ಳೂರು, ಮುರುಂಡಿ ಕೆರೆಗಳು ತುಂಬಿ ಕೊಡಿ ಬಿದ್ದರೆ ಮಾತ್ರ ಅರಸೀಕೆರೆ ಕೆರೆಗೆ ನೀರು ಬರುತ್ತದೆ.
ಇದು ಇಡೀ ನಗರಕ್ಕೆ ನೀರಿನ ಜಲಮೂಲವಾಗಿದೆ. ಸುದೈವ ಈ ಬಾರಿ ವರುಣ ಕೃಪೆಯಿಂದಾಗಿ ಹಾರನಹಳ್ಳಿ, ತಳ್ಳೂರು, ಮುರುಂಡಿ ಕೆರೆಗಳು ಈಗಾಗಲೇ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಅಲ್ಲಿಂದ ಹರಿದು ನೀರು ಅರಸೀಕೆರೆ ಒಡಲು ಸೇರಿ ಭರ್ತಿ ಹಂತಕ್ಕೆ ಬಂದಿದೆ.
2023ಕ್ಕೆ ಜೆಡಿಎಸ್ ಅಧಿಕಾರದ ಗದ್ದುಗೆಗೆ ಏರುವುದು ಕಲ್ಲಿನ ಮೇಲೆ ಬರೆದ ಶಾಸನ: H.D ರೇವಣ್ಣ
ಜೆಡಿಎಸ್ ಪಕ್ಷ 2023ಕ್ಕೆ ರಾಜ್ಯದ ಅಧಿಕಾರದ ಗದ್ದುಗೆ ಏರುವುದು ಕಲ್ಲಿನ ಮೇಲೆ ಬರೆದ ಶಾಸನವಾಗಿದೆ ಎಂದು ಶಾಸಕ ಎಚ್. ಡಿ. ರೇವಣ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಆಲೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2023ರಲ್ಲಿ ಆಲೂರು - ಸಕಲೇಶಪುರ ಕ್ಷೇತ್ರದಲ್ಲಿ ಆನೆ ಕಾರಿಡಾರ್ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲಾಗುವುದು. ಕೊರೊನಾದಂತಹ ಮಹಾಮಾರಿ ರೋಗದಿಂದ ಜೀವವನ್ನು ಉಳಿಸಿಕೊಳ್ಳಲು ರೈತರು ತಮ್ಮಲ್ಲಿದ್ದ ಹಣ, ಒಡವೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಜರ್ಝರಿತರಾಗಿರುವ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆ, ರಸ್ತೆ, ಮನೆ, ತೋಟಗಾರಿಕೆ ಬೆಳೆಗಳು ಹಾಳಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅತಿವೃಷ್ಟಿಯಿಂದ ನಾಶಗೊಂಡಿರುವ ಬೆಳೆ ಹಾಗೂ ಬಿದ್ದ ಮನೆಗಳಿಗೆ ಸರ್ಕಾರ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಇವರ ಆಡಳಿತದಲ್ಲಿ ಸುಮಾರು 10 ಬಾರಿ ವಿದ್ಯುತ್ ದರ ಏರಿಸಲಾಗಿದೆ. ಧರ್ಮ, ಜಾತಿ ತಾರತಮ್ಯಕ್ಕೆ ಒಳಗಾಗಿ ಈದ್ಗಾ ಮೈದಾನದಲ್ಲಿ ಗಣಪತಿ ಇಡುತ್ತೇವೆ ಎಂಬುದು ಎಷ್ಟರ ಮಟ್ಟಿಗೆ ಸರಿ. ದೇವೇಗೌಡರ ಆಡಳಿತ ಅವಧಿಯಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.50 ಹಾಗೂ ಸರಕಾರಿ ನೌಕರಿಯಲ್ಲಿ ಶೇ.33 ಮೀಸಲು ಕಲ್ಪಿಸಲಾಯಿತು. ಎಚ್. ಡಿ. ಕುಮಾರಸ್ವಾಮಿ ಆಡಳಿತದಲ್ಲಿ ರೈತರ ಸಾಲ ಮನ್ನಾ ಮಾಡಿರುವುದನ್ನು ಜನತೆ ಮರೆತಿಲ್ಲ ಎಂದರು.
ಕೊಡಗು:
ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬಸ್
ಎಸ್.ಆರ್ ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬಸ್ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿ ತಿರುವಿನಲ್ಲಿ ನಡೆದಿದೆ. ಮಡಿಕೇರಿಯಿಂದ ಮೈಸೂರು ತೆರಳುತ್ತಿದ್ದ ಬಸ್ಸಿನಲ್ಲಿ 21 ಮಂದಿ ಪ್ರಯಾಣಿಸುತ್ತಿದ್ದರು.ಈ ವೇಳೆ ಮಡಿಕೇರಿ ಕಡೆ ಬರುತ್ತಿದ್ದ ಬೈಕ್ ಅಡ್ಡ ಬಂದ ಪರಿಣಾಮ ಬಸ್ ನ ಚಕ್ರಕ್ಕೆ ಬೈಕ್ ಸಿಲುಕಿ ಬಸ್ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಬೈಕ್ ಸವಾರ ಪಾರಾಗಿದ್ದಾನೆ. ಬಸ್ ನಲ್ಲಿದ್ದ 21 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


0 Comments