ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕಾರಿನಲ್ಲಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದು ಲಕ್ಷಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಕಾರಿನಲ್ಲಿ ಅಕ್ರಮವಾಗಿ ನಗದು ಸಾಗಾಣಿಕೆ ನಡೆಸುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾರೆ. ಬಳಿಕ ಕಾರ್ ಹಿಂದೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಅವರನ್ನು ಬಿಡದ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್(31), ಇಮ್ರಾನ್ ಖಾನ್(27) ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್(23) ಮತ್ತು ಸಯ್ಯದ ಅಮೀನ್(29)ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಕಾರಿನ ಬ್ಯಾಗಿನಲ್ಲಿ ತುಂಬಿಟ್ಟ 500, 200, 100 ಹಾಗೂ 50 ರೂ. ಮುಖಬೆಲೆಯ ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆಯನ್ನು ಹಾನಗಲ್ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್‌ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದ ತಂಡ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.









0 Comments