ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಯ ಸಮೀಪಕ್ಕೆ ತಲುಪಿ ಅದೃಷ್ಟವಶಾತ್ ನಿಯಂತ್ರಣಕ್ಕೆ ದೊರೆತಿರುವ ಘಟನೆ ಇಂದು ಸಂಭವಿಸಿದೆ. ಎಡಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಆಗಿಂದಾಗೆ ವಾಹನಗಳ ಅಪಘಾತ ಸಂಭವಿಸುತ್ತಿದ್ದು ಕಳೆದೆರಡು ದಿನಗಳಲ್ಲಿ ಹಲವರು ಅಪಘಾತಕ್ಕೆ ಸಿಲುಕಿ ಗಾಯಕ್ಕೀಡಾಗಿದ್ದಾರೆ.
ಇದನ್ನೂ ಓದಿ:ಅಂಗನವಾಡಿ ಕೇಂದ್ರದ ಬೀಗ ಒಡೆದು ದಿನಸಿ ದೋಚಿದ ಕಳ್ಳರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಹೇಮಾವತಿ ನದಿಯ ತಟದಲ್ಲಿ ನಿಂತಿದೆ. ಕಾರಿನ ಚಾಲಕ ತರುವೆ ಆದರ್ಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಟ್ಟಿಗೆಹಾರದಿಂದ ಮೂಡಿಗೆರೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡ ತರುವೆ ಆದರ್ಶ್ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಭಾರೀ ಮಳೆ ಹಾಗೂ ಗಾಳಿಗೆ ಸಿಲುಕಿದ ಪರಿಣಾಮ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಎಂಬಂತೆ ಚಾಲಕ ಸುರಕ್ಷಿತವಾಗಿದ್ದಾರೆ.
ಕಾರುಗಳ ನಡುವೆ ಮುಖಾಮುಖಿ :
ಇನ್ನು ಚಾರ್ಮಾಡಿ ಘಾಟಿಯಲ್ಲಿ ಮಳೆ-ಗಾಳಿಯ ಅಬ್ಬರ ಮುಂದುವರೆದಿದ್ದು ಎರಡು ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಚಿಕ್ಕಮಗಳೂರು ಕಡೆಯಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಇನ್ನೊಂದು ಕಾರಿನ ನಡುವೆ ಡಿಕ್ಕಿಯಾಗಿದ್ದು, ಒಂದು ಕಾರಿನಲ್ಲಿ ನಾಲ್ವರು, ಮತ್ತೊಂದು ಕಾರಿನಲ್ಲಿ ಇಬ್ಬರು ಇದ್ದು ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ.
ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಮಳೆಯ ತೀವ್ರತೆ ಹೆಚ್ಚಿರುವುದರಿಂದ ಪ್ರಯಾಣಿಕರು ಜಾಗರೂಕತೆವಹಿಸಿ ನಿಧಾನಗತಿಯಲ್ಲಿ ಚಾಲನೆ ನಡೆಸುವುದು ಸೂಕ್ತ.
- ತನು ಕೊಟ್ಟಿಗೆಹಾರ, ವರದಿಗಾರರು





0 Comments