ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಜೀಪೊಂದು ಗುಡ್ಡದ ಮೇಲಿನ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಹಾಗೂ ಮಂಜು ಕವಿದ ವಾತಾವರಣವಿದ್ದು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಬೊಲೆರೋ ವಾಹನವು ಮುಳ್ಳಯ್ಯನಗಿರಿಯಿಂದ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿದೆ.


ಸುಮಾರು 100-150 ಅಡಿ ಎತ್ತರದಿಂದ ಗುಡ್ಡದ ಮೇಲಿನ ರಸ್ತೆಯಿಂದ ಕೆಳಗೆ ಉರುಳಿ ಬಿದ್ದು ಅದೇ ಗುಡ್ಡ ಕೆಳಭಾಗದ ಮತ್ತೊಂದು ರಸ್ತೆ ಮೇಲೆ ವಾಹನ ಬಿದ್ದಿದ್ದು ಚಿಕ್ಕಮಗಳೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. 

ನಿನ್ನೆ ಸಂಜೆಯ ವೇಳೆ ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಜೊತೆಗೆ ತೀವ್ರವಾದ ಮಂಜು ಕೂಡ ಇದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ನಡೆದಿದೆ.


ವಾಹನದಲ್ಲಿ ನಾಲ್ಕು ಜನ ಪ್ರವಾಸಿಗರಿದ್ದು ಅದೃಷ್ಟವಶಾತ್ ಯಾರಿಗೂ ದೊಡ್ಡ ಪ್ರಮಾಣದ ನೋವು ಸಂಭವಿಸಿಲ್ಲ. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ದೊಡ್ಡ ಪ್ರಮಾಣದ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಮುಳ್ಳಯ್ಯನಗಿರಿಯ ಕಿರಿದಾದ ರಸ್ತೆಯಲ್ಲಿ ಯೂ ಟರ್ನ್ ಆಕಾರದ ರಸ್ತೆಯಲ್ಲಿ ಗಾಡಿಯನ್ನ ಟರ್ನ್ ಮಾಡುವಾಗ ಸ್ಟೇರಿಂಗ್ ರಾಡ್ ಕಟ್ ಆಗಿ ಗಾಡಿ ಪಲ್ಟಿಯಾಗಿದೆ ಎನ್ನಲಾಗಿದೆ.