ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಈ ಹಿಂದೆ ಖಾಸಗಿ ಕಂಪನಿಯೊಂದು ಜಮೀನಿನ ಮೇಲೆ ಸೋಲಾರ್ ವಿದ್ಯುತ್ ತಂತಿ ಅಳವಡಿಕೆ ಮಾಡಲು ಮುಂದಾಗಿತ್ತು ಇದನ್ನು ವಿರೋಧಿಸಿ ಅನೇಕ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ವಶಕ್ಕೆ ಪಡೆದಿದ್ದರು. ಪ್ರಸ್ತುತ ಜಿಲ್ಲಾಧಿಕಾರಿಗಳು ಕಂಪನಿಯೊಂದಿಗೆ ಮಾತನಾಡಿ ರೈತರಿಗೆ ಕೋಟಿಗೂ ಅಧಿಕ ಮೌಲ್ಯದ ಪರಿಹಾರ ದೊರೆಯುವಂತೆ ಮಾಡಿದ್ದಾರೆ. 

ಇದನ್ನೂ ಓದಿ: ಚಿಕ್ಕಮಗಳೂರು: ಆರೆಸ್ಸೆಸ್ ಮುಖಂಡನ ಕಾರಿನ ಮೇಲೆ ‘Kill you Jihad’ ಎಂದು ಬರೆದು, ನಾಲ್ಕೂ ಚಕ್ರದ ಗಾಳಿ ತೆಗೆದ ಕಿಡಿಗೇಡಿಗಳು ಸ್ಥಳಕ್ಕೆ ಪೊಲೀಸ್ ಭೇಟಿ, ಪರಿಶೀಲನೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಿಮ್ಮಲಾಪುರದ ರೈತರ ಜಮೀನಿನ ಮೇಲೆ ಸೋಲಾರ್ ವಿದ್ಯುತ್ ತಂತಿ ಎಳೆಯಲು ಕಂಪನಿ ಮುಂದಾಗಿತ್ತು, ಆದರೆ ಇದಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ರೈತರು ನಮಗೆ ಪರಿಹಾರವನ್ನು ನೀಡದೇ ಯಾಕೆ ಅನ್ಯಾಯ ಮಾಡುತ್ತಿದ್ದೀರಿ ಇದು ಸರಿಯಲ್ಲ ಪರಿಹಾರ ಒದಗಿಸಿ ನಂತರ ಲೈನ್ ಎಳೆಯಿರಿ ಎಂಬುದಾಗಿ ಹೇಳಿದ್ದರು. ಈ ಕುರಿತಾಗಿ ಸ್ಥಳಕ್ಕೆ ಬಂದ ಕಂಪನಿಯವರನ್ನು ಪ್ರಶ್ನಿಸಿದ್ದರು. ಪ್ರಶ್ನೆ ಮಾಡಿದ ರೈತರ ಮೇಲೆ ಪೊಲೀಸರಿಂದ ಪ್ರಹಾರವೂ ನಡೆದಿತ್ತು. 


ಆದರೆ ಈಗ ಅದೆಲ್ಲಾ ಶಮನವಾಗಿದ್ದು, ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಪರಿಹಾರ ಕೊಡಿಸುವ ಮೂಲಕ ಜಿಲ್ಲಾಧಿಕಾರಿಗಳು ರೈತರನ್ನು ಸಮಾಧಾನ ಮಾಡಿದ್ದಾರೆ. ಖಾಸಗಿ ಕಂಪನಿ ಕೋಟಿಗೂ ಹೆಚ್ಚು ಪರಿಹಾರ ಉಳಿಸಿಕೊಂಡಿತ್ತು. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮಧ್ಯಸ್ಥಿಕೆಯಲ್ಲಿ 30 ಕ್ಕೂ ಹೆಚ್ಚು ರೈತರಿಗೆ ಪರಿಹಾರದ ಡಿ.ಡಿ ವಿತರಣೆ ಮಾಡಲಾಗಿದೆ. 

ಯಾವುದೇ ಗೊಂದಲವಿಲ್ಲದೆ ರೈತರಿಗೂ ಅನ್ಯಾಯವಾಗದಂತೆ ಸೂಕ್ತ ರೀತಿಯಲ್ಲಿ ಮಧ್ಯ ಪ್ರವೇಶಿಸಿ ಪರಿಹಾರ ಒದಗಿಸಿದ ಜಿಲ್ಲಾಧಿಕಾರಿಗಳಿಗೆ ರೈತರೂ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ನಡೆ ಅನೇಕರ ಪ್ರಶಂಸೆಗೆ ಕಾರಣವಾಗಿದೆ.

ಮನೆ ಮುಂದಿದ್ದ ತೊಟ್ಟಿಗೆ ಬಿದ್ದು 11 ತಿಂಗಳ ಮಗುವಿನ ದುರ್ಮರಣ: 

ಶಿವಮೊಗ್ಗ: ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮಗನಾದ ಅಕ್ಷಯ್ (11 ತಿಂಗಳು ) ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿರುವ ಹಸುಗೂಸು.

ಮುಂದಿನ ವಾರ ಮಗುವಿನ ಪ್ರಥಮ ವರ್ಷದ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬವರ್ಗದವರು ಯೋಚಿಸಿದರು ಆದರೆ ವಿಧಿಯ ಆಟ ಎಂಬಂತೆ ಮಗುವಿನ ಸಾವಿನಿಂದ ಮನೆಯಲ್ಲೀಗ ಸಂಭ್ರಮ ಬದಲಾಗಿ ಸೂತಕದ ವಾತಾವರಣ ನಿರ್ಮಾಣವಾಗಿದೆ.



ಈ ದುರಂತದಿಂದಾಗಿ ಊರಿನಲ್ಲಿ ಸ್ಮಶಾನ ಮೌನ ಆವರಿಸಿದ್ದು ನಿನ್ನೆ ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅಂಬೆಗಾಲು ಇಡುತ್ತಾ ಒಡಾಡುತ್ತಿದ್ದ ಮಗು ತನಗರಿವಿಲ್ಲದಂತೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. 

ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಮಗುವಿನ ಆರೋಗ್ಯದಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಕಳೆಬರಹವನ್ನು ಪೋಷಕರಿಗೆ ನೀಡುವಾಗ ಅಲ್ಲಿ ಸೇರಿದ್ದ ಜನಸ್ತೋಮ ಹಾಗೂ ಕುಟುಂಬಸ್ಥರ ಆಕ್ರಂದನ ನೆರೆದಿದ್ದ ಜನರ ಹೃದಯ ಹಿಂಡುತ್ತಿತ್ತು.

ಮೃತ ಮಗುವಿನ ಮೂರು ವರ್ಷದ ಅಕ್ಕ ನಕ್ಷತ್ರ ಹಾಗೂ ತಂದೆ ತಾಯಿಯ ದುಃಖ ಹೇಳತೀರದಾಗಿತ್ತು. 

ನಿನ್ನೆ ಸಂಜೆಯೇ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ವಿಧಿಗೆ ಹಿಡಿಶಾಪ ಹಾಕುತ್ತಾ ಊರಿನ ಗ್ರಾಮಸ್ಥರೂ ಭಾಗಿಯಾಗಿ ಆ ಪುಟ್ಟ ಮಗುವಿನ ಶವ ಸಂಸ್ಕಾರ ನಡೆಸಿದರು. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.