ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಅನೇಕ ಪ್ರದೇಶಗಳಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದು, ಜನರು ಅತಿವ ಆತಂಕಕ್ಕೊಳಗಾಗಿದ್ದಾರೆ. ಎತ್ತಿನಭುಜ ವ್ಯಾಪ್ತಿಯಲ್ಲೂ ಆನೆಗಳು ಕಾಣಿಸಿಕೊಂಡಿರುವ ಹಿನ್ನೆಲೆ ಪ್ರಸಿದ್ಧ ಚಾರಣ ಸ್ಥಳವಾದ ಎತ್ತಿನ ಭುಜ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಮಾವನಿಂದಲೇ ಗರ್ಭವತಿ ಮೇಲೆ ಅತ್ಯಾಚಾರಕ್ಕೆ ಯತ್ನ; ದೂರು ದಾಖಲು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಲಯದ ಚಾರಣಕ್ಕೆ ಹೆಸರುವಾಸಿಯಾದ ಸ್ಥಳವಾದ ಎತ್ತಿನ ಭುಜ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಕರ್ನಾಟಕ ಅರಣ್ಯ ಇಲಾಖೆಯ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗ ಎತ್ತಿನ ಭುಜ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಆನೆಗಳು ಈ ಭಾಗದಲ್ಲಿ ಸಂಚಾರ ನಡೆಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ಸ್ಥಳೀಯರ ಒತ್ತಾಯದ ಮೇರೆಗೆ ಅಂತೆಯೇ ಮೇಲಧಿಕಾರಿಗಳ ನಿರ್ದೇಶನದಂತೆ ಎತ್ತಿನ ಭುಜ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ - ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ
ಕಳೆದ ಕೆಲವು ದಿನಗಳ ಹಿಂದಷ್ಟೇ ಮೂಡಿಗೆರೆಯಲ್ಲಿ ರಸ್ತೆ ಬದಿಯಲ್ಲೇ ದಾಳಿ ನಡೆಸಿದ ಕಾಡಾನೆಯು ಓರ್ವ ಕೃಷಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಬಲಿ ಪಡೆದುಕೊಂಡಿತ್ತು. ಘಟನಾ ಸಂಬಂಧ ವ್ಯಾಪಕವಾದ ವಿರೋಧ ಸ್ಥಳೀಯರಿಂದ ವ್ಯಕ್ತವಾಗಿತ್ತು. ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯನ್ನು ಖಂಡಿಸಿ ಮುಡಿಗೆರೆಯ ಅರಣ್ಯ ಇಲಾಖೆಯ ಮುಂದೆ ಸಾರ್ವಜನಿಕರು ಮೃತ ದೇಹವಿಟ್ಟು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಕಾವು ತೀವ್ರಗೊಂಡು ಸಿಟ್ಟಿಗೆದ್ದ ಕೆಲ ಪ್ರತಿಭಟನಾಕಾರರು ಡಿವೈಎಸ್ಪಿ ಕಾರು ಪಲ್ಟಿ ಹೊಡೆಸಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಮುಖಾಂತರ ಪ್ರತಿಭಟನಾಕಾರರನ್ನು ಚದುರಿಸುವ ಕೆಲಸವನ್ನು ಮಾಡಿದ್ದರು.
ಆನೆಗಳು ಈ ಭಾಗದಲ್ಲಿ ಓಡಾಡುತ್ತಲೇ ಇರುವುದರಿಂದ ಯಾವುದೇ ರೀತಿಯ ದುರ್ಘಟನೆಗಳು ಸಂಭವಿಸದ ರೀತಿಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ಎತ್ತಿನ ಭುಜ ಚಾರಣಕ್ಕೆ ನಿಷೇಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





0 Comments