ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹಳ್ಳಿಭಾಗದ ಶಾಲಾ ವಿದ್ಯಾರ್ಥಿ ಜೋಸೆಫ್ ತನ್ನ ಸಾಮರ್ಥ್ಯ, ಆಸಕ್ತಿ, ಇಚ್ಛೆಯಿಂದಾಗಿ ಅಂತೆಯೇ ಶಿಕ್ಷಕರ ಸಂಪೂರ್ಣ ಸಹಕಾರದಿಂದ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರು ಭಾಗದ ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಜೋಸೆಫ್ ಇನ್ಸ್ಪೈರ್ ಅವಾರ್ಡ್ ನಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿದ್ದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಪ್ರಸ್ತುತ ಧಾವಿಸಿದ್ದಾನೆ.
ವಿದ್ಯಾರ್ಥಿ ಜೋಸೆಫ್ 09 ನೆ ತರಗತಿಯಲ್ಲಿದ್ದಾಗ ಈ ಮಾಡೆಲ್ ಆಯ್ಕೆಯಾಗಿದ್ದು ಪ್ರಸ್ತುತ ವಿದ್ಯಾರ್ಥಿ ITI ಓದುತ್ತಿದ್ದು, ಮಲೆನಾಡಿಗೆ ಅಗತ್ಯವಿರುವ ರೀತಿಯಲ್ಲಿ ಈ ರೆಫ್ರಿಜರೇಟರ್ ವಿನ್ಯಾಸಗೊಂಡಿದೆ.
ಮಳೆ ಮುಂತಾದ ಕಾರಣಗಳಿಂದಾಗಿ ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಸದಾ ಕಾಡುತ್ತದೆ. ಈ ಸಮಸ್ಯೆಯಿಂದಾಗಿ ರೆಫ್ರಿಜರೇಟರ್ ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ ಈ ಹಿನ್ನೆಲೆ ವಿದ್ಯುತ್ ಇಲ್ಲದ ರೀತಿಯಲ್ಲಿ ಆಹಾರಗಳನ್ನು ಪೂರಕವಾಗಿ ಇಡುವ ಸಲುವಾಗಿ ಇದ್ದಲು ಬಳಸಿಕೊಂಡು ಮಾರ್ಪಾಡು ಮಾಡಲಾಗಿರುವ ಪರಿಸರ ಸ್ನೇಹಿ ರೆಫ್ರಿಜರೇಟರ್ ಜೋಸೆಫ್ ನ ಮಾಡೆಲ್ ಆಗಿದೆ.
ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುವ ರೆಫ್ರಿಜರೇಟರ್ ವಿನ್ಯಾಸದ ಕುರಿತು:
ಪ್ರಾಥಮಿಕವಾಗಿ ಮೆಟಲ್ ಶೀಟನ್ನು ಫ್ರಿಜ್‌ನ ಆಕಾರದಲ್ಲಿ ವೆಲ್ಡರ್ ನಿಂದ ವೆಲ್ಡ್ ಮಾಡಿಸಿ, ಫ್ರಿಜ್ ನ ಆಕಾರದಂತೆ ನಿರ್ಮಾಣ ಮಾಡಿ, ಒಳಭಾಗದಲ್ಲಿ ತೆಳು ಮೆಶ್ ಅಳವಡಿಸಿ ಮೂರು ಭಾಗಗಳಲ್ಲಿ ಒಂದು ಇಂಚ್ ಜಾಗವನ್ನು ಬಿಟ್ಟು ಮೇಲ್ಭಾಗದಲ್ಲಿ ಟ್ರೇ ಒಂದರಲ್ಲಿ ನೀರನ್ನು ಇಟ್ಟು, ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವಿರುವ ಇದ್ದಿಲನ್ನು ಉಳಿದ ಭಾಗಗಳಿಗೆ ತುಂಬಲಾಗಿದೆ. ಸದಾ ತಣ್ಣಗೆ, ತಂಪಾಗಿ ಫ್ರಿಡ್ಜ್ ನ್ನು ಇದ್ದಿಲು ಇಡುವುದರಿಂದ ಹಾಗೂ ನೀರು ಕೂಡ ಇರುವುದರಿಂದ, ವಿದ್ಯುತ್ ಬಳಸದೇ ಸದಾ ಫ್ರಿಡ್ಜ್ ನಲ್ಲಿಡುವ ಆಹಾರಗಳು ಹಾಳಾಗದಂತೆ ಈ ಪರಿಸರ ಸ್ನೇಹಿ ಫ್ರಿಡ್ಜ್ ಕಾಪಾಡುತ್ತದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕಿ ಮಂಜುಳಾ.
ಸರ್ಕಾರಿ ಶಾಲೆಗಳ ಸೌಲಭ್ಯ ಸರಿ ಇಲ್ಲ, ವಿದ್ಯಾರ್ಥಿಗಳಿಗೆ ಸರಿಯಾದ ಅವಕಾಶಗಳು ಲಭ್ಯವಾಗುವುದಿಲ್ಲ ಸರ್ಕಾರಿ ಶಾಲೆಗಳು ಆಗಿವೆ ಹೀಗಿವೆ ಎಂಬ ಊಹಾಪೋಹಗಳ ನಡುವೆ ಮಲೆನಾಡಿನ ಉಗ್ರಾಮದ ಶಾಲಾ ಬಾಲಕ ಸಾಧನೆಗೈದಿರುವುದು ಅನೇಕರಿಗೆ ಪ್ರೇರಣೆಯಾಗಲಿದೆ. ಇಂತಹ ಸರ್ಕಾರಿ ಶಾಲೆಗಳ ಅನೇಕ ಶಿಕ್ಷಕರ ಉತ್ತಮ ಮಾರ್ಗದರ್ಶನ, ಸಲಹೆ ಸಹಕಾರ ವಿದ್ಯಾರ್ಥಿಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವುದಂತೂ ಸುಳಲ್ಲ.
ವಿದ್ಯಾರ್ಥಿ ಜೋಸೆಫ್ ಪರಿಸರ ಸ್ನೇಹಿ ಎಂಬ ಕಲ್ಪನೆ ಹಾಗೂ ಆಧಾರದ ಮೇಲೆ ಮಾಡೆಲ್ ರಚಿಸಿದ್ದು ಈ ಮಾಡೆಲ್ ರಾಜ್ಯ ಮಟ್ಟದಲ್ಲಿ ಪುರಸ್ಕೃತಗೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲಾ ವಿದ್ಯಾರ್ಥಿ ಜೋಸೆಫ್ ನ ಈ ಸಾಧನೆಗೆ ಶಿಕ್ಷಕರು ಹಾಗೂ ಪೋಷಕವರ್ಗ ಸಂಪೂರ್ಣ ಸಹಕಾರ ನೀಡಿದ್ದು ವಿಜ್ಞಾನ ಶಿಕ್ಷಕರಾದ ಮಂಜುಳಾ ಅವರ ಸಂಪೂರ್ಣ ಸಹಕಾರ ಈ ಸಾಧನೆಗೆ ಬಲತುಂಬಿದೆ.
ವಿದ್ಯಾರ್ಥಿ ಜೋಸೆಫ್ ರಾಷ್ಟ್ರಮಟ್ಟದಲ್ಲೂ ಉತ್ತಮವಾದ ಸಾಧನೆಯನ್ನು ಮಾಡಿ ಶಾಲೆಗೆ ಹಾಗೂ ಹುಟ್ಟೂರಿಗೆ ಇನ್ನಷ್ಟು ಕೀರ್ತಿಯನ್ನು ತರಲಿ ಎಂದು ಶಾಲಾ ಮುಖ್ಯೋಪಾಧ್ಯಯರು, ಸಹಶಿಕ್ಷಕರು ಹಾಗೂ ಗ್ರಾಮಸ್ಥರು ಹಾರೈಸಿದ್ದಾರೆ.





0 Comments