ಕೊಡಗು: (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿ ಜೇನಿನಿಂದ ಕಚ್ಚಿಸಿಕೊಂಡು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಕೊಡಗಿನ ಭಾಗಮಂಡಲದ ಭ್ರಷ್ಟಾಚಾರಿಗಳಿಗಾಗಿದೆ.
ಕೊಡಗಿನ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಜೇನಿನ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಕಮಿಷನ್ ದಂಧೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಕೃಷಿ ಸಹಕಾರ ಸಂಘದ ಪ್ರಗತಿಗಿಂತ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ಪ್ರಗತಿ ಮಾತ್ರ ಹೆಚ್ಚಾಗಿರುವುದು ಕಂಡುಬಂದಿದೆ.
ಈ ಕುರಿತಾಗಿ ಜೇನು ಮತ್ತು ಮೇಣವನ್ನು ಸರಬರಾಜು ಮಾಡುತ್ತಿದ್ದ ತೀರ್ಥಹಳ್ಳಿಯ ಕೆಂದಲ್ಬೈಲಿನಲ್ಲಿರುವ ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್ ಮಾಲೀಕ ದೇವರಾಜ್, ಭಾಗಮಂಡಲ ಜೇನು ಕೃಷಿಕರ ಸಹಕಾರ ಸಂಘದ ನಿರ್ದೇಶಕ ಕೋಡಿ ಮೋಠಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಕಮಿಷನ್ ಅವ್ಯವಹಾರದ ಕುರಿತು ಉಲ್ಲೇಖ ಮಾಡಲಾಗಿದೆ.
ಭಾಗಮಂಡಲ ಜೇನು ಸಹಕಾರ ಸಂಘಕ್ಕೆ ಬರೆದ ಪತ್ರದಲ್ಲೇನಿದೆ?
2010 ರಿಂದ 2022ರ ವರೆಗೆ ನಿಮ್ಮ ಸಂಸ್ಥೆಗೆ ಜೇನು ಹಾಗೂ ಮೇಣವನ್ನು ಸರಬರಾಜು ಮಾಡಿದ್ದೇವೆ, ಒಟ್ಟಾರೆ 419,872 ಕೆಜಿ ಜೇನನ್ನು ಸರಬರಾಜು ಮಾಡಿದ್ದು ಜೇನಿನ ನಿಗದಿತ ದರ 132ರಂತೆ ಬಿಲ್ ಪಡೆದಿರುತ್ತಾರೆ ಆದರೆ ಕೆಜಿಗೆ 60 ರೂಪಾಯಿಯಂತೆ ಬ್ಯಾಂಕ್ ನ ಖಾತೆಗೆ ಹಣವನ್ನು ಜಮಾ ಮಾಡಿರುತ್ತಾರೆ, ಇದರಿಂದಾಗಿ ಒಂದು ಕೆಜಿಯಲ್ಲಿ 72 ರೂಪಾಯಿಯಂತೆ 419,872 ಕೆ.ಜಿ ಗೆ 3,02,30,784 ರೂಪಾಯಿ ಗಳಷ್ಟು ಮೌಲ್ಯದ ಕಮಿಷನ್ ಅನ್ನು ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಪಡೆದಿರುತ್ತಾರೆ, ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನಿಮ್ಮ ಸಂಸ್ಥೆಯ ನಿರ್ದೇಶಕರಾದ ಮೋಟಯ್ಯ ಅವರು ಕರೆಯಲ್ಲಿ ಮಾಹಿತಿ ಪಡೆದಿದ್ದು, ಈ ನಂತರದಲ್ಲಿ ನಿಧಾನ ಗತಿಯಲ್ಲಿ ಜೇನು ಪಡೆಯುವುದನ್ನು ಕಡಿಮೆ ಮಾಡುತ್ತಾ ಹಣ ಹಾಕುವುದನ್ನು ಸಹ ನಿಲ್ಲಿಸಿದ್ದಾರೆ, ನಾಲ್ಕು ಟನ್ ಜೇನಿನ ಹಣವನ್ನು ಎರಡು ತಿಂಗಳಾದರೂ ಕಳುಹಿಸಲಿಲ್ಲ. ನಿಮ್ಮ ಸಂಸ್ಥೆಯ ಹಾಲಿ ಮತ್ತು ಮಾಜಿ ಕಾರ್ಯದರ್ಶಿಗಳು ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು 2010 ರಿಂದ 12 ರ ವರೆಗಿನ ಲೆಕ್ಕವೇ ಆಗಿಲ್ಲ. ಅಂತೆಯೇ ಟೆಸ್ಟಿಂಗ್ ನಲ್ಲಿ ಫೇಲ್ ಮಾಡುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬುದಾಗಿಯೂ ಉಲ್ಲೇಖಿಸಲಾಗಿದ್ದು ಸಂಸ್ಥೆಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಯಾರು ಹೊಣೆ ಎಂಬುದಾಗಿಯೂ ಹಾಗೂ ನಷ್ಟದಲ್ಲಿ ಓಡುತ್ತಿರುವ ಸಂಸ್ಥೆಯ ಕುರಿತಾಗಿಯೂ ಪತ್ರದಲ್ಲಿ ಉಲ್ಲೇಖಿಸಿ ನ್ಯಾಯವನ್ನು ದೊರಕಿಸುವಂತೆ ಕೋರಿದ್ದಾರೆ. ಒಂದು ವೇಳೆ ನ್ಯಾಯ ದೊರಕಿಸಿ ಕೊಡದೆ ಹೋದಲ್ಲಿ ಸರ್ಕಾರದ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಪತ್ರದಲ್ಲಿ ತಿಳಿಸಲಾಗಿದೆ.
ಕಂಪ್ಯೂಟರ್ ಬಿಲ್ ಕೊಡದೆ ವಂಚನೆ ಆರೋಪ:
ಭಾಗಮಂಡಲ ಜೇನು ಸಹಕಾರ ಸಂಘದಿಂದ ಒಂದೇ ಒಂದು ಒರಿಜಿನಲ್ ಕಂಪ್ಯೂಟರ್ ಬಿಲ್ಲನ್ನು ಇವರಿಗೆ ನೀಡದೆ ಬರಿ ತೂಕದ ಬಿಲ್ ಮಾತ್ರ ಒದಗಿಸಿರುತ್ತಾರೆ, ಇದಲ್ಲದೆ ಯಾವಾಗಲೂ ಒಂದು ಖಾಲಿ ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಅಂದಿನ ತೂಕವನ್ನು ಬರೆದು 132 ದರವನ್ನು ನಿಗದಿಪಡಿಸಿ ಬರೆದಿರುತ್ತಾರೆ ಆದರೆ ನಿಮ್ಮ ಸಂಸ್ಥೆ ನೀಡುವ ಹಣ ಕೇವಲ 60 ರೂಪಾಯಿ ಆಗಿದ್ದು ಉಳಿದ 72 ಹಣಕ್ಕೆ ಜಿಎಸ್‌ಟಿ ಪಾವತಿಸಲಾಗುತ್ತಿತ್ತು ಪಡೆಯದೇ ಇರುವ ಹಣವನ್ನೂ ಆಡಿಟ್ ನಲ್ಲಿ ತೋರಿಸುತ್ತಿದ್ದು ಇದರಿಂದಾಗಿ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ ಎಂದು ತೀರ್ಥಹಳ್ಳಿಯ ದುರ್ಗಾಶಕ್ತಿ ಇಂಡಸ್ಟ್ರಿ ತಿಳಿಸಿದೆ.
ಈ ಸಂಬಂಧ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೂ ದೂರು ನೀಡಲಾಗಿದ್ದು, ಸಹಕಾರ ಸಚಿವ ಸೋಮಶೇಖರ್ ಅವರೊಂದಿಗೆ ಚರ್ಚಿಸಿ ಬೆಂಗಳೂರಿಗೆ ಆಹ್ವಾನಿಸಿದ್ದಾರೆ. ಮಾಜಿ ಕಾರ್ಯದರ್ಶಿಯ ಅವ್ಯವಹಾರವನ್ನು ಮುಚ್ಚಿ ಹಾಕುವುದಾದರೆ ಈ ವಿಷಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂಬುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಾವು ಕಳುಹಿಸಿದ 06 ಟನ್ ಜೇನನ್ನು ಇಡಲು ನಮ್ಮ ಸಂಸ್ಥೆಯಲ್ಲಿ ಜಾಗವಿಲ್ಲವೆಂದು ಮತ್ತು ನಿರ್ದೇಶಕರು ಬಯ್ಯುತ್ತಾರೆಂದು 2,000 ಕೆಜಿ ಜೇನು ವಾಪಸ್ ಕಳುಹಿಸಿ ಒಂದೇ ವಾರದಲ್ಲಿ 6000 ಕೆಜಿ ಜೇನನ್ನು ಕೊಡಗಿನ ಪ್ರಗತಿಪರ ಜೇನು ಕೃಷಿಕರ ಸಂಘದಿಂದ ತರಿಸಿಕೊಂಡಿದ್ದಾರೆ ಈ ಮೂಲಕ ಹಣವನ್ನೂ ನೀಡದೆ ವ್ಯವಹಾರವನ್ನು ಮುಂದುವರೆಸದೇ ಸಂಸ್ಥೆಯನ್ನು ನಷ್ಟಕ್ಕೆದೂಡಿದ್ದಾರೆ ಎಂದು ಕಮಿಷನ್ ಕುರಿತಾದ ಬಹಿರಂಗ ಪತ್ರದಲ್ಲಿ ತೀರ್ಥಹಳ್ಳಿ ದುರ್ಗಾಶಕ್ತಿ ಇಂಡಸ್ಟ್ರಿಯ M.H ದೇವರಾಜು ಆರೋಪ ಮಾಡಿದ್ದಾರೆ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದು ತುಪ್ಪ ಸವಿದ ಅಧ್ಯಕ್ಷ, ಕಾರ್ಯದರ್ಶಿ?:
ಅಧ್ಯಕ್ಷರ ಮೂಗಿನ ಅಡಿಯಲ್ಲಿ ಭ್ರಷ್ಟಾಚಾರ, ಆದರೆ ನುಣುಚಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಕುಮಾರ್ ಅವರ ವ್ಯಾಪ್ತಿಯೊಳಗೆಯೇ ಕೋಟಿ ಕೋಟಿ ಭ್ರಷ್ಟಾಚಾರ ಮಾಡಲಾಗಿದೆ, ಇದರಲ್ಲಿ ಕೇವಲ ಕಾರ್ಯದರ್ಶಿ ಪಾಲು ಇರುವ ಸಾಧ್ಯತೆ ತೀರಾ ಕಡಿಮೆ. ಇಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ಸುದೀರ್ಘ ಕಾಲ ಆಗುವಾಗ ಅಧ್ಯಕ್ಷರಾಗಿದ್ದವರಿಗೆ ಇದು ಗಮನಕ್ಕೆ ಬಂದಿಲ್ಲವೆಂದು, ಕಾರ್ಯದರ್ಶಿ ಮಾತ್ರ ಹೊಣೆ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ, ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸುವ ಕೆಲಸ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.





0 Comments