ಚಿಕ್ಕಮಗಳೂರು:

ಉಪ ಸಭಾಪತಿ ಎಂಕೆ ಪ್ರಾಣೇಶ್ ಅವರಿಂದ ನೆರವಿನ ಹಸ್ತ: 

ಮಾನ್ಯ ವಿಧಾನ ಪರಿಷತ್ ನ ಉಪಾಸಭಾಪತಿಗಳಾದ ಎಂ.ಕೆ ಪ್ರಾಣೇಶ್ ರವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾರಕವಾದ ರಿತ್ವಿಕ್ ಮಗುವಿನ ಚಿಕಿತ್ಸೆಗಾಗಿ 5.00.000 ಲಕ್ಷ ಪರಿಹಾರವನ್ನು ಕೊಡಿಸಿರುತ್ತಾರೆ.


ಶೃಂಗೇರಿ ಶಾರದಾ ಪೀಠಕ್ಕೆ ಭೇಟಿನೀಡಿದ ಎಂ.ಬಿ ಪಾಟೀಲ್

ಶೃಂಗೇರಿ ಶಾರದಾ ಪೀಠಕ್ಕೆ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ‌ ಅಧ್ಯಕ್ಷರಾದ ಎಂ.ಬಿ ಪಾಟೀಲ್ ಭೇಟಿ ನೀಡಿ ತಾಯಿ ಶಾರದೆಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಜೇಗೌಡ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಅಂಶುಮಂತ್,ಕೆಪಿಸಿಸಿ ಸದಸ್ಯರಾದ ಶ್ರೀ ಕಡ್ತೂರು ದಿನೇಶ್, ಮಾಜಿ ಎಂ.ಎಲ್.ಸಿ ಶ್ರೀಮತಿ ಗಾಯತ್ರಿ ಶಾಂತೇಗೌಡ, ಮುಖಂಡರಾದ ದೊರನಾಳ ಪರಮೇಶ್ ಇದ್ದರು.

ಶೃಂಗೇರಿಗೆ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ರಥ :

ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ನಾರಾಯಣ ಗುರುಗಳ ರಥೋತ್ಸವ ಕಾರ್ಯಕ್ರಮ ಇಂದು ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸಿದ್ದು ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಸಮಾಜದವರು,(ಬಿಲ್ಲವ ಸಮಾ) ಸಾರ್ವಜನಿಕರು ಹಾಗೂ ಶಾಸಕ ಟಿಡಿ ರಾಜೇಗೌಡ ಸಹ ಭಾಗವಹಿಸಿದ್ದರು.

ಮಳೆಹಾನಿ ಪ್ರದೇಶಗಳಿಗೆ ಕೇಂದ್ರದ ಅಧಿಕಾರಿಗಳ ಭೇಟಿ, ಪರಿಶೀಲನೆ:

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿ ಕುರಿತು ಇಂದು ಕೇಂದ್ರದ ಅಧಿಕಾರಿಗಳ ತಂಡ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಸುತ್ತಮುತ್ತಲಿನ ಭಾಗಗಳನ್ನು ಪರಿಶೀಲನೆ ನಡೆಸಿತು. ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯಾದ್ಯಂತ ಸಂಭವಿಸಿದ ಭಾರೀ ಪ್ರಮಾಣದ ನಷ್ಟ ಹಾಗೂ ಅನಾಹುತಗಳ ಕುರಿತು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಕೇಂದ್ರದ ಅಧಿಕಾರಿಗಳಾದ ಆಶೀಶ್ ಕುಮಾರ್, ಮಹೇಶ್ ಕುಮಾರ್, ಹಾಗೂ ಭವ್ಯಾ ಪಾಂಡೆ ಅವರಿಗೆ ಸಂಕ್ಷಿಪ್ತವಾಗಿ ತಿಳಿಸಿದರು. ಶೃಂಗೇರಿಯ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹಾನಿ ಕುರಿತಾದ ಸಭೆಯನ್ನು ಆಯೋಜಿಸಲಾಗಿತ್ತು, ಈ ವೇಳೆ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಸಂಭವಿಸಿದ ಅನಾಹುತಗಳ ಕುರಿತಾಗಿ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಭೆಯಲ್ಲಿ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ನಂತರದಲ್ಲಿ ಶೃಂಗೇರಿ ಹೊರವಲಯದಲ್ಲಿ ಭಾರೀ ಮಟ್ಟದಲ್ಲಿ ಕುಸಿದಿರುವ ಆಗುಂಬೆ, ಉಡುಪಿ ಭಾಗಗಳನ್ನು ಸಂಪರ್ಕಿಸುವ ರಸ್ತೆಯನ್ನು ಹಾಗೂ ಧರೆ ಕುಸಿತದಿಂದ ಸಂಪೂರ್ಣವಾಗಿ ಹಾನಿಯಾಗಿರುವ ಆಗುಂಬೆ ಗಣೇಶ್ ಹೆಗ್ಗಡೆ ಅವರ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದರು.

ಹಾಸನ :

ಟಿಕೆಟ್ ಗಾಗಿ ಆರಂಭವಾದ ಪೈಪೋಟಿ :

ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಮುಂದಾಗಿರುವ ಜೆಡಿಎಸ್‌, ಯಾರಿಗೆ ಟಿಕೆಟ್‌ ನೀಡಲಿದೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಒಂದೆಡೆ ಕೇಳಿ ಬರುತ್ತಿವೆ.ಇನ್ನೊಂದೆಡೆ, ಮಾಜಿ ಶಾಸಕ ಎಚ್‌.ಎಸ್‌. ಪ್ರಕಾಶ್‌ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಅವರಿಗೇ ಟಿಕೆಟ್‌ ನೀಡಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಸದ್ಯ ಹಾಸನದಲ್ಲಿ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದು, ಈ ಬಾರಿ ಜೆಡಿಎಸ್‌ನಿಂದ ಪ್ರಬಲ ಪೈಪೋಟಿ ಎದುರಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಹೇಗಾದರೂ ಮಾಡಿ, ಮತ್ತೊಮ್ಮೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಲೆಕ್ಕಾಚಾರ ಜೆಡಿಎಸ್ ಮುಖಂಡರದ್ದು. ಅದಕ್ಕಾಗಿಯೇ ಭವಾನಿ ರೇವಣ್ಣ ಇತ್ತೀಚೆಗೆ ಹಾಸನ ನಗರದಲ್ಲಿ ಸಂಚರಿಸಿ, ಗಣೇಶ ಪೆಂಡಾಲ್‌ಗಳಿಗೆ ಭೇಟಿ ನೀಡಿದ್ದಾರೆ. ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಮಹಿಳೆಯೊಬ್ಬರಿಗೆ ಟಿಕೆಟ್‌ ನೀಡಿದರೆ, ಗೆಲುವಿಗೆ ಸುಲಭವಾಗಲಿದೆ. ಮಹಿಳಾ ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎನ್ನುವ ಲೆಕ್ಕಾಚಾರವೂ ಇದೆ. ಒಟ್ಟಾರೆ ಚುನಾವಣೆ ಸಮೀಪಿಸುತ್ತಿರುವ ಈ ಹೊಸ್ತಿಲಲ್ಲಿ ಸ್ಪರ್ಧೆಯಂತೂ ಜೋರಾಗಿದೆ.

ಹಾಸನ ವಿಮಾನ ನಿಲ್ದಾಣದ ಅಭಿವೃದ್ಧಿ: 

ನಾಗರಿಕ ವಿಮಾನಯಾನ ಸಚಿವಾಲಯವು ದೇಶಾದ್ಯಂತದ ನೂತನ ವಿಮಾನ ನಿಲ್ದಾಣ ಸ್ಥಳಗಳನ್ನು ನಿರ್ಮಿಸಲು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಕರ್ನಾಟಕದ ಕೋಲಾರ, ಹಾಸನ ಹಾಗೂ ರಾಯಚೂರು ಜಿಲ್ಲೆಗಳು ಸ್ಥಾನ ಪಡೆದಿವೆ. ಅವುಗಳು ಕಡಿಮೆ ಸೇವೆ ಅಥವಾ ಸೇವೆ ಸಲ್ಲಿಸದ ವಾಯು ನೆಲೆಗಳಾಗಿ ಅರ್ಹತೆ ಪಡೆದಿವೆ.ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯ ಮುಂದಿನ ಸುತ್ತಿನಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಇಲ್ಲಿ ಕರ್ನಾಟಕದ ಹಾಸನ, ಕೋಲಾರ ಮತ್ತು ರಾಯಚೂರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಶೀಘ್ರದಲ್ಲೇ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬಹುದು ಎನ್ನಲಾಗಿದೆ.


ಮಳೆಗೆ ಕೊಚ್ಚಿ ಹೋದ ಕಾಲಿ ಫ್ಲವರ್:

ರಾಜ್ಯದೆಲ್ಲೆಡೆ ರಣ ಮಳೆಗೆ ಜನ ಜೀವನವೇ ತ್ತರವಾಗಿದೆ. ಹಾಸನ ಜಿಲ್ಲೆಯ ಜನರು ಇದೀಗ ತತ್ತರಿಸಿ ಹೋಗಿದ್ದಾರೆ ಬೆಳೆದ ಬೆಳೆಗಳೆಲ್ಲಾ ನೀರು ಪಾಲಾಗಿದೆ. ಅನೇಕ ಬೆಳೆಗಳು ನೀರುಪಾಲಾಗಿದೆ. ಹೂಕೋಸು ಕ್ಯಾಲಿ ಫ್ಲವರ್ ಹೀಗೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿದೆ.ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪರಿಹಾರ ಕ್ರಮಕ್ಕಾಗಿ ರೈತರು ಸರಕಾರದ ಮೊರೆ ಹೋಗಿದ್ದಾರೆ.

ಶಿವಮೊಗ್ಗ: 

ಕೇಸರಿಯಿಂದ ಆವೃತವಾದ ಶಿವಮೊಗ್ಗ :

ನಗರದಲ್ಲಿ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಶಾಂತಿಯುತವಾಗಿ ನಡೆಯಿತು. ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೋಟೆ ಪಾರ್ವತಿ ಭೀಮೇಶ್ವರ ದೇವಾಲಯದಿಂದ ರಾಜ ಬೀದಿ ಉತ್ಸವಕ್ಕೆ ಮಧ್ಯಾಹ್ನ ಚಾಲನೆ ನೀಡಲಾಯಿತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಹಿಂದು ಕಾರ್ಯಕರ್ತ ಹರ್ಷ, ದಕ್ಷಿಣ ಕನ್ನಡ ಪ್ರವೀಣ್ ನೆಟ್ಟಾರು, ಸಾವರ್ಕರ್‌ ಭಾವಚಿತ್ರಗಳು ಹಾಗೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಎಂಪಿ ರೇಣುಕಾಚಾರ್ಯ ಮತ್ತಿತರ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ಗಣೇಶ ವಿಸರ್ಜನೆ ವೇಳೆ ಗಮನಸೆಳೆದ ಬೆಂಕಿಯಾಟ:

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಗಣೇಶೋತ್ಸವದ ಪ್ರಯುಕ್ತ ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಯನ್ನ ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿಯವರು ನಡೆಸಿಕೊಟ್ಟರು ಗಣಪತಿಯ ವಿಸರ್ಜನಾ ಮಹೋತ್ಸವದ ವೇಳೆ ಬೆಂಕಿಯಾಟ ಪ್ರದರ್ಶನ ಜನರ ಕಣ್ಮನ ಸೆಳೆಯಿತು. ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನ ಕಳೆದ 2 ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಗಣೋಶೋತ್ಸವದ ಸಂದರ್ಭದಲ್ಲಿ ಅದ್ದೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನ ಸಾರ್ವಜನಿಕರು ಕಣ್ತುಂಬಿಕೊಂಡರು.

ಕೇಸರಿ ಧ್ವಜ ವಶಕ್ಕೆ ಪಡೆದ ಪೊಲೀಸರು :

ಶಿವಮೊಗ್ಗ ವೃತ್ತದ ಅಶೋಕ ನಗರದಲ್ಲಿ ರಾಷ್ಟ್ರ ಲಾಂಛನದ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಗಣೇಶ ಚತುರ್ಥಿ ಮೆರವಣಿಗೆಯ ಅಂಗವಾಗಿ ಪಟ್ಟಣದಾದ್ಯಂತ ಹಿಂದೂ ಗುಂಪುಗಳು ಕೇಸರಿ ಧ್ವಜಗಳನ್ನು ಮತ್ತು ಸಾವರ್ಕರ್ ಹಾಗೂ ಬಜರಂಗದಳದ ನಾಯಕ ಹರ್ಷನ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿದ್ದವು. ಇದೇ ವೇಳೆ ಶಿವಮೊಗ್ಗ ವೃತ್ತದ ಅಶೋಕ ನಗರದಲ್ಲಿ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜವನ್ನೂ ಹಾಕಲಾಗಿತ್ತು. ದುರಾದೃಷ್ಟವೆಂದರೆ ಇದನ್ನು ಯಾರೂ ಕೂಡ ವಿರೋಧಿಸಿಲ್ಲ. ಯಾರೂ ಕೂಡ ಗಮನಿಸಿಯೂ ಇಲ್ಲ. ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಇಂದು ಅದನ್ನು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಎರಡು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಅದ್ಧೂರಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದರೆ, ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉಂಟಾದ ಸಾವರ್ಕರ್‌ ಫ್ಲೆಕ್ಸ್‌ ತೆರವು ಮತ್ತು ಯುವಕನಿಗೆ ಚಾಕು ಇರಿತ ಪ್ರಕರಣದಿಂದಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.