ಕಳಸ:(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಜೀವಮೆಟ್ಟಲು ಸಮೀಪದ ಗೊಡ್ಲುಮನೆ ಪ್ರದೇಶದಲ್ಲಿ ಆನೆಗಳು ದಾಂಧಲೆ ನಡೆಸಿದ್ದು ಅಪಾರ ಪ್ರಮಾಣದ ಬೆಳೆಯನ್ನು ಆನೆಗಳು ನಾಶ ಮಾಡಿದ್ದು, ರೈತರನ್ನು ತೀವ್ರ ಆತಂಕಕ್ಕೀಡುಮಾಡಿದೆ.

ಇದನ್ನೂ ಓದಿ: ತೀರ್ಥಹಳ್ಳಿ ಜೇನಿನಿಂದ ಕಚ್ಚಿಸಿಕೊಂಡು ಮುಖ ಮುಚ್ಚಿಕೊಂಡ ಭಾಗಮಂಡಲದ ಭ್ರಷ್ಟಾಚಾರಿಗಳು

ಭಾನುವಾರ ರಾತ್ರಿ ಕಾಡಾನೆಗಳು ಕಾಫಿ, ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದ್ದು, ಕೃಷಿಕ ಗೋಪಾಲ ಗೌಡ, ಮಲ್ಲೇಗೌಡ ಅವರ ತೋಟ ಮತ್ತು ಆಸುಪಾಸಿನ ತೋಟಗಳಲ್ಲಿ ಆನೆಗಳು ರಾತ್ರಿಯಿಡೀ ಘೀಳಿಟ್ಟಿದ್ದು ಜೀವನದ ಆಧಾರವಾದ ಅಡಿಕೆ, ಬಾಳೆಗಿಡಗಳನ್ನು ಮುರಿದು ನಾಶಗೊಳಿಸಿದೆ.  


ದಾರಿಯಲ್ಲಿ ಅಡ್ಡಲಾಗಿ ಸಿಕ್ಕ ಬೇಲಿಯನ್ನು ಕೂಡ ಆನೆಗಳು ಪುಡಿ ಮಾಡಿದ್ದು, ಕಳೆದ 2 ದಿನಗಳಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕೇಶಿಯಾ ಪ್ಲಾಂಟೇಶನ್ ಒಳಗೆ ಆಶ್ರಯ ಪಡೆದಿದ್ದ ಆನೆಗಳು ಭಾನುವಾರ ರಾತ್ರಿ ತೋಟಗಳಿಗೆ ನುಗ್ಗಿ ಭಾರೀ ಪ್ರಮಾಣದ ನಷ್ಟವನ್ನು ರೈತರಿಗೆ ಭರಿಸಿದೆ. 

ಒಂದೆಡೆ ಸಂಪೂರ್ಣವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು ಬೆಳೆಹಾನಿ ಸಂಭವಿಸುತಿದ್ದರೆ ಇತ್ತ ಆನೆದಾಳಿಯಿಂದ ಭಾರೀ ಪ್ರಮಾಣದ ನಷ್ಟವೂ ಮಲೆನಾಡಿನ ರೈತರಿಗೆ ಉಂಟಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದು ಈ ಕುರಿತಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈಗಾಗಲೇ ಕಾರ್ಯ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇಂದು ಬೆಳಗಿನ ಜಾವ ಆನೆಗಳು ಗಣಪತಿಕಟ್ಟೆ ಆಸುಪಾಸಿನಲ್ಲಿ ಕಂಡು ಬಂದಿವೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದ್ದು, ಮೂಡಿಗೆರೆ, ಕಳಸ ಸುತ್ತಮುತ್ತಲಿನ ಭಾಗದಲ್ಲಿ ಆನೆದಾಳಿ ಮಿತಿಮೀರಿದೆ.