ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಾರಕವಾದ ಥಲೆಸ್ಸೀಮಿಯ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕ ರಿತ್ವಿಕ್ ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಾರ್ವಜನಿಕರು, ಟ್ರಸ್ಟ್ ಗಳು ದೇಣಿಗೆ ಸಂಗ್ರಹ ನಡೆಸಿದ್ದು ಎಲ್ಲರ ಸಹಕಾರ ಹಾಗೂ ಸಹಾಯ ಹಸ್ತದಿಂದ ಬಾಲಕ ರಿತ್ವಿಕ್ ನ ಚಿಕಿತ್ಸಾ ವೆಚ್ಚಕ್ಕೆ ತಗುಲುವ ಹಣ ಸಂಗ್ರಹವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರ್ಗೂರೂ ದಿವಾಕರ ಹಾಗೂ ಶಾಲಿನಿ ದಂಪತಿಯ ಪುತ್ರನಾದ ಆರು ವರ್ಷದ ಬಾಲಕ ರಿತ್ವಿಕ್ ಗೆ ಥಲೆಸ್ಸೀಮಿಯ ಖಾಯಿಲೆ ಬಾಧಿಸಿತ್ತು. ಈ ಖಾಯಿಲೆಯಿಂದ ಬಾಲಕನನ್ನು ಗುಣಮುಖಪಡಿಸಲು ನಲವತ್ತೊಂದು ಲಕ್ಷ ರೂಪಾಯಿ ಹಣದ ಅವಶ್ಯಕತೆಯಿದ್ದು ಮಧ್ಯಮ ವರ್ಗದ ಕುಟುಂಬವಾದ್ದರಿಂದ ಈ ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ಕುಟುಂಬ ವರ್ಗದವರಿಂದ ಸಾಧ್ಯವಾಗದ ಕಾರಣ ಪೋಷಕರು ದಾನಿಗಳ ಮೊರೆ ಹೋಗಿದ್ದರು.
ಮೊದಲಿಗೆ ಪೋಷಕರು ದಾನಿಗಳ ಬಳಿ ನೆರವಾಗುವಂತೆ ಸಹಾಯ ಕೋರಿದ್ದು ನಂತರದಲ್ಲಿ ರಿತ್ವಿಕ್ ಗಾಗಿ ಅಭಿಯಾನವೇ ಆರಂಭವಾಯಿತು. ಅನೇಕ ಸಂಖ್ಯೆಯಲ್ಲಿ ಸ್ಥಳೀಯರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹೃದಯ ವೈಶಾಲ್ಯತೆಯುಳ್ಳ ಅನೇಕರು ರಿತ್ವಿಕ್ ನ ಚಿಕಿತ್ಸಾ ಹಣವನ್ನು ಭರಿಸುವ ಸಲುವಾಗಿ ಹಣ ಸಂಗ್ರಹಿಸಿದ್ದು ಎಲ್ಲರ ಸಹಕಾರದಿಂದ ಆತನ ಚಿಕಿತ್ಸೆಗೆ ಅಗತ್ಯವಿದ್ದ 41 ಲಕ್ಷ ರೂಪಾಯಿ ಹಣ ಇದೀಗ ಸಂಗ್ರಹಗೊಂಡಿದೆ.
ನನ್ನ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸಲು ನೆರವಾದ ಸರ್ವರಿಗೂ ಹಾಗೂ ಸಂಘ ಸಂಸ್ಥೆಗಳ ಸಂಪೂರ್ಣ ಪದಾಧಿಕಾರಿಗಳಿಗೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಸಹಾಯದಿಂದಾಗಿಯೇ ನನ್ನ ಮಗನಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾಗಿದೆ. - ದಿವಾಕರ ಬೀರ್ಗೂರು, ಬಾಲಕ ರಿತ್ವಿಕ್ ತಂದೆ
ಕಾರುಣ್ಯ ನಿಧಿ ಟ್ರಸ್ಟ್ ಮಂಗಳೂರು, ಅವಧೂತ ವಿನಯ್ ಗುರೂಜಿ, ಶ್ರೀ ಮಠ ಹರಿಹರಪುರ ಹಾಗೂ ಟೆಂಡರ್ ಚಿಕನ್, ಮೂಡಿಗೆರೆಯ ಯುವಕರ ತಂಡ ಸಾರ್ವಜನಿಕರು ಹೃದಯ ಶ್ರೀಮಂತಿಕೆಯುಳ್ಳ ಅನೇಕ ದಾನಿಗಳು ಬಾಲಕ ರಿತ್ವಿಕ್ ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಶ್ರಮಿಸಿದ್ದಾರೆ.
ಮಗನ ಖಾಯಿಲೆಯನ್ನು ಗುಣಪಡಿಸುವ ಸಲುವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೂಡ ಆತನ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದು ರಿತ್ವಿಕ್ ಶೀಘ್ರವಾಗಿ ಗುಣಮುಖವಾಗಿ ಬರಲಿ, ರಿತ್ವಿಕ್ ನ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಸ್ಥಳೀಯರು ಹಾರೈಸಿದ್ದಾರೆ.
ಏನಿದು ಥಲೇಸ್ಸಿಮಿಯ ಖಾಯಿಲೆ :
ತಿಂಗಳಾಂತ್ಯಕ್ಕೆ ರಕ್ತ ಕೊಡಿಸದಿದ್ದಲ್ಲಿ ರಿತ್ವಿಕ್ ನ ಮುಖ ಬಿಳಿಚಿಕೊಳ್ಳುತ್ತದೆ, ಜ್ವರ ಬಂದರೆ ಕಡಿಮೆಯಾಗುವುದೇ ಇಲ್ಲ, ಬಿಳಿ ರಕ್ತಕಣ ಉತ್ಪತ್ತಿಯಾಗದೇ ಇರುವ ಖಾಯಿಲೆಯೇ ಥಲೆಸ್ಸೀಮಿಯ. ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇರುವುದು ಬಿಳಿ ರಕ್ತಕಣಗಳಿಗೆ ಮಾತ್ರ, ಈ ಬಿಳಿ ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಯಾವುದಾದರೂ ಖಾಯಿಲೆ ಬಂದರೆ ಅದು ಕಡಿಮೆಯಾಗುವುದಿಲ್ಲ. ರಿತ್ವಿಕ್ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪತಿ ನಿಂತು ಹೋಗಿದೆ. ಸಾಮಾನ್ಯ ಜ್ವರ ಬಂದರೂ ಕೂಡ ಮೆದುಳಿಗೆ ಹತ್ತಿಕೊಳ್ಳುತ್ತದೆ. ಇದೀಗ ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿಗೆ ಹೋಗಿಬರುತ್ತಿದ್ದು, ಈತನಿಗೆ ಅಂಟಿದ ಖಾಯಿಲೆ ದೂರವಾಗಬೇಕಾದರೆ ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ ( ಬೋನ್ ಮ್ಯಾರೋ ಟ್ರಾನ್ಸ್ ಪ್ಲೇಟೇಶನ್) ಇದರಿಂದ ಮಾತ್ರ ಸಾಧ್ಯ.

%20-%20Copy.jpeg)



0 Comments