ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಇತಿಹಾಸದಲ್ಲೇ ದಾಖಲೆ ಎಂಬಂತೆ ಒಂದೇ ಗಂಟೆಯಲ್ಲಿ ಇಂದು ಅತ್ಯಧಿಕವಾಗಿ ಮಳೆಯಾಗಿದೆ. 

ಚಿಕ್ಕಮಗಳೂರು ತಾಲೂಕಿನ ಸಾರಗೋಡು, ಹುಯಿಗೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಸಾರಗೋಡಿನಲ್ಲಿ ಸಹ ಮಳೆಯಾಗಿದೆ. ಒಂದು ಗಂಟೆಯಲ್ಲಿ 200 ಮಿ.ಮೀ ಮಳೆಯಾಗಿದ್ದು ದಾಖಲೆಯನ್ನೇ ನಿರ್ಮಿಸಿದೆ. ಇದರೊಂದಿಗೆ ರೈತರಿಗೆ ತೀವ್ರತರಹದ ಸಂಕಷ್ಟವನ್ನು ಸಹ ಮಳೆ ತಂದೊಡ್ಡಿದೆ. 

ಇದನ್ನೂ ಓದಿ : ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು 


ರಣಮಳೆಯ ಅಬ್ಬರಕ್ಕೆ ರಸ್ತೆಯ ಮೇಲೆಲ್ಲಾ ನೀರು ಹರಿದಿದ್ದು, ದೊಡ್ಡ ಗಾತ್ರದ ಬಡಿಗೆಗಳು, ಕಟ್ಟಿಗೆಗಳು ನೀರು ಹರಿಯುವ ರಭಸಕ್ಕೆ ತೇಲಿ ಬಂದಿದೆ. ಇದಲ್ಲದೇ ಅನೇಕ ಮನೆಗಳಿಗೆ ನೀರು ನುಗ್ಗಿದ್ದರೆ, ಮನೆಯ ಕಾಂಪೌಂಡ್ ಗಳು ಸಹ ಕುಸಿತಗೊಂಡಿದೆ.

ಭಾರೀ ಮಳೆಯಿಂದಾಗಿ ರೈತರು ಕಂಗಾಲಾಗಿದ್ದು ಬೆಳೆ ನಷ್ಟ ಹೊಂದುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ. ಮಳೆಯ ನೀರು ರಸ್ತೆಯ ಮೇಲೆಲ್ಲಾ ರಭಸವಾಗಿ ಹರಿಯುತ್ತಿದ್ದರೂ ಕೂಡ ಅಗತ್ಯವಾಗಿ ತೆರಳಬೇಕಾದ ಕಾರಣದಿಂದಾಗಿ ಹರಿಯುವ ನೀರನ್ನು ಲೆಕ್ಕಿಸದೇ ಅನೇಕರು ರಸ್ತೆಯನ್ನು ದಾಟುವ ದೃಶ್ಯಗಳು ಸಹ ಕಂಡುಬಂದವು. 

ಕೆಲ ದಿನಗಳ ಕಾಲ ಕಡಿಮೆಯಾಗಿದ್ದ ಮಳೆಯ ಆರ್ಭಟ ಮತ್ತೆ ಮುಂದುವರೆದಿರುವುದು ಜನರಿಗೆ ದಿಕ್ಕುದೋಚದಂತೆ ಮಾಡಿದೆ. ಎರಡು ತಿಂಗಳ ಹಿಂದೆ ಸಂಭವಿಸಿದ ಮಳೆಯಿಂದ ಉಂಟಾದ ಹಾನಿ ಸರಿದೂಗುವ ಮೊದಲೇ ಇನ್ನೂ ಹೆಚ್ಚಿನ ಮಳೆಯಾಗುತ್ತಿರುವುದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.