ಚಿಕ್ಕಮಗಳೂರು:
ಇನ್ನೆರಡು ದಿನ ಎಲ್ಲೋ ಅಲರ್ಟ್ ಘೋಷಣೆ:
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೀವ್ರ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಎರಡು ದಿನಗಳ ಕಾಲ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಸಾಕಷ್ಟು ತಗ್ಗಲಿದೆ ಎಂಬುದಾಗಿಯೂ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರ ಜೊತೆಯಲ್ಲೇ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಿದೆ.
ಶೃಂಗೇರಿಯಲ್ಲಿ ಮೊಸರು ಕುಡಿಕೆ ಆಯೋಜನೆ :
ಶೃಂಗೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶೃಂಗೇರಿಯಲ್ಲಿ ಜಿಲ್ಲಾ ಮಟ್ಟದ ಮೊಸರು ಕುಡಿಕೆ ಕಾರ್ಯಕ್ರಮವನ್ನು ಶ್ರೀ ರಾಮ ಸೇನೆ ಶೃಂಗೇರಿ ಘಟಕವು ಆಯೋಜನೆ ಮಾಡಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸೆಪ್ಟೆಂಬರ್ 17 ರ ಶನಿವಾರದಂದು ಮಧ್ಯಾಹ್ನ 02 ಗಂಟೆಗೆ ಶೃಂಗೇರಿ ಪಟ್ಟಣ ಪಂಚಾಯತ್ ನ ಮುಂಭಾಗದಲ್ಲಿರುವ ಗುರುಸೇವಾ ಧುರೀಣ ಪದ್ಮಶ್ರೀ ಪುರಸ್ಕೃತ ಡಾ. ಬಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಶ್ರೀ ರಾಮ ಸೇನೆ ಶೃಂಗೇರಿ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಫೈರ್ ಬ್ರಾಂಡ್ ನಾಯಕ, ಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಅವರು ಮಾತನಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ.ಶೆಟ್ಟಿ ವಹಿಸಿಕೊಂಡಿದ್ದು ಕಾರ್ಯಕ್ರಮವನ್ನು ಶ್ರೀ ರಾಮ ಸೇನೆ ಶೃಂಗೇರಿ ಘಟಕ ಆಯೋಜನೆ ಮಾಡಿದೆ.
ವೇಗವಾಗಿ ರಸ್ತೆಗೆ ಅಡ್ಡಬಂದ ಬೈಕ್ ತಪ್ಪಿಸಲು ಹೋಗಿ ಸಂಪೂರ್ಣ ಬದಿಗೆ ಸರಿದ KSRTC ಬಸ್ :
ಎದುರಿನಿಂದ ವೇಗವಾಗಿ ಬೈಕ್ ಸವಾರ ಅಡ್ಡಬಂದ ಪರಿಣಾಮ ಸರ್ಕಾರಿ ಬಸ್ ಸಂಪೂರ್ಣವಾಗಿ ಬದಿಗೆ ಸರಿದು ಮಾಮೂಲಿ ಬಾಗಿಲಿನಿಂದ ಬಸ್ ನಲ್ಲಿ ಇಳಿಯಲು ಆಗದೇ ಇದ್ದುದರಿಂದ, ಜನರು ಡ್ರೈವರ್ ಸೀಟ್ ನಿಂದ ಇಳಿದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಬಳಿ ಈ ಘಟನೆ ನಡೆದಿದ್ದು, ನಲವತ್ತಕ್ಕೂ ಅಧಿಕ ಪ್ರಯಾಣಿಕರಿದ್ದ ಗುತ್ತಿಹಳ್ಳಿಯಿಂದ ಬೆಟ್ಟಗೆರೆ ಮೂಲಕ ಮೂಡಿಗೆರೆ ಕಡೆಗೆ ತೆರಳುತ್ತಿದ್ದ KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಇಳಿದಿದೆ. ಚರಂಡಿಯ ಪಕ್ಕದಲ್ಲಿ ಇಳಿಯಲು ಸೂಕ್ತವಾದ ಸ್ಥಳ ವಿಲ್ಲದೇ ಇದ್ದುದರಿಂದ ಹಾಗೂ ಬಸ್ ಒಂದು ಕಡೆಗೆ ಸಂಪೂರ್ಣವಾಗಿ ಬಾಗಿದ್ದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಗೊಂಡು, ನಂತರದಲ್ಲಿ ಚಾಲಕ ಬಸ್ಸನ್ನು ಹತ್ತಿ ಇಳಿಯುವ ಬಾಗಿಲಿನಿಂದ ಕೆಳಗಿಳಿದಿದ್ದಾರೆ.
ಅಧಿಕಾರಿಗಳ ನಿರಂತರ ದಬ್ಬಾಳಿಕೆ ಆರೋಪ; ಕುರುವಳ್ಳಿ ಬಂಡೆ ಕಾರ್ಮಿಕರೊಂದಿಗೆ ಕಿಮ್ಮನೆ ರತ್ನಾಕರ್ ಸಭೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಬಂಡೆ ಕೂಲಿ ಕಾರ್ಮಿಕರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿರುದ್ಧ ಕಾರ್ಮಿಕರು, ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಯ ಆರೋಪದ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಪಡೆದು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಜೊತೆಗೆ ಮೊನ್ನೆ ದಿನ ಅಧಿಕಾರಿಗಳಿಂದ ಕಾರ್ಮಿಕರಿಗೆ ಆದಂತಹ ನಷ್ಟವನ್ನು ಭರಿಸಿಕೊಡಬೇಕೆಂದು ತಾಕೀತು ಮಾಡಿದರು. ಈ ಕುರಿತಾಗಿ ಶೀಘ್ರವೇ ಕಾರ್ಮಿಕರ ಪರವಾದ ಸೂಕ್ತ ಕ್ರಮವನ್ನು ಕೈಗೊಂಡು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿ ಕೊಡದಿದ್ದಲ್ಲಿ ಹೋರಾಟ ಕೈಗೆತ್ತಿಕೊಂಡು ಕಾರ್ಮಿಕ ವಿರೋಧಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಉಪವಾಸ ಕೂರುವುದಾಗಿ ಎಚ್ಚರಿಸಿದರು.
ಆಟೋದಲ್ಲಿ ಬಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿರುವ ಆಟೋ ಚಾಲಕ:
ಶಿವಮೊಗ್ಗ ನಗರದಲ್ಲಿ ಮೊಹಮ್ಮದ್ ಗೌಸ್ ಎಂಬುವರು ಆಟೋ ಚಾಲನೆ ಮಾಡುತ್ತಾ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಸೆ.10ರಂದು ಅವರ ಆಟೋದಲ್ಲಿ ಮಹಿಳೆ ಶಹತಾಜ್ ಭಾನು ಎಂಬುವವರು ನಗರದ ಅಶೋಕ ಸರ್ಕಲ್ನಿಂದ ಟಿಪ್ಪುನಗರಕ್ಕೆ ಪ್ರಯಾಣಿಸಿದ್ದರು. ಮಹಿಳೆ ಶಹತಾಜ್ ಭಾನು ಆಟೋದಿಂದ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ಮೊಹಮ್ಮದ್ ಗೌಸ್ ಬ್ಯಾಗ್ನ್ನು ಮಹಿಳೆಗೆ ವಾಪಾಸ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬ್ಯಾಗಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಬ್ಯಾಗ್ ನಲ್ಲಿ 40 ಗ್ರಾಂ ಚಿನ್ನಾಭರಣವಿತ್ತು. ಆಟೋ ಚಾಲಕ ಮಹಮ್ಮದ್ ಗೌಸ್ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಅಭಿನಂದನಾ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ. ಅಂತೆಯೇ ಸ್ಥಳೀಯರು ಕೂಡ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಸನ:
ರಾಜ್ಯದ ಜನರು ಕುಮಾರಣ್ಣನ ಸರ್ಕಾರ ಬಯಸುತ್ತಿದ್ದಾರೆ, ಸಿದ್ರಮಯ್ಯನ ಫಿಲಂ ಓಡಲ್ಲ: ಇಬ್ರಾಹಿಂ ಕಿಡಿ
ರಾಜ್ಯದಾದ್ಯಂತ ಜೆಡಿಎಸ್ ಪರವಾದ ವಾತಾವರಣ ಇದೆ. ಜನರು ಕುಮಾರಸ್ವಾಮಿ, ದೇವೇಗೌಡರ ಪರವಾಗಿದ್ದಾರೆ. ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು. ಜನರು ಕುಮಾರಸ್ವಾಮಿ, ದೇವೇಗೌಡರ ಪರವಾಗಿದ್ದಾರೆ. ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು. ಪ್ರಕಾಶ್ ಅವರಿಗಿದ್ದ ದೊಡ್ಡ ಹೃದಯ ಸ್ವರೂಪ್ ನಲ್ಲೂ ಇದೆ. ದೊಡ್ಡ ಮನಸ್ಸು ನಿಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ದೇವೇಗೌಡರಿಗೆ ಇರುವ ಮನಸ್ಸೇ ಕುಮಾರಸ್ವಾಮಿ ಅವರಲ್ಲಿದೆ. ಅದಕ್ಕೆ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದರು.
ಸಮಾಜ ಕಟ್ಟುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಪ್ರೀತಂಗೌಡ
ಬೇರೆ ಉದ್ಯಮದಲ್ಲಿ ಲಾಭವಿದ್ದರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮಾಜ ಕಟ್ಟುವ ಕೆಲಸದಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಪ್ರೀತಮ್ ಜೆ. ಗೌಡ ಶ್ಲಾಘಿಸಿದರು. ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನ ಮತ್ತು ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸಾವಿರಾರು ವರ್ಷಗಳಿಂದ ಗುರುಕುಲ ಪದ್ಧತಿ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಭಾರತದಲ್ಲಿ ಜ್ಞಾನದ ಖಜಾನೆ ಇದೆ. ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಇದ್ದರೂ ಕೂಡ ನಮ್ಮಲ್ಲಿ ಇರುವುದು ಭಾರತೀಯ ಶಿಕ್ಷಣ ವ್ಯವಸ್ಥೆಯಾಗಿದೆ. ನಾವು ಇವತ್ತು ಶಿಕ್ಷಣ ವ್ಯವಸ್ಥೆಯಿಂದ ಅನೇಕ ಸವಾಲುಗಳಿದ್ದರೂ ಸ್ಥಿತಿವಂತರಾಗಿದ್ದೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ಸರಕಾರ ಮತ್ತು ಸರಕಾರೇತರ ಎಂದು ನಾವೇ ಭಾU ಮಾಡಿಕೊಂಡಿದ್ದೇವೆ. 130 ಕೋಟಿ ಜನಸಂಖ್ಯೆ ಇರುವ ಭಾರತ ದೇಶಕ್ಕೆ ಶಿಕ್ಷಣ ಕೊಡುವ ಪರಿಸ್ಥಿತಿಯಲ್ಲಿ ಬೇರೆ ಉದ್ದಿಮೆಯಲ್ಲಿ ಲಾಭ ಇದ್ದರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಸಮಾಜವನ್ನು ಕಟ್ಟುವ ಕೆಲಸವನ್ನು ಖಾಸಗಿ ಶಿಕ್ಷಣ ಅನುದಾನ ರಹಿತ ಶಾಲೆಯ ಆಡಳಿತ ಮಂಡಳಿಯವರು ಕಳೆದ ಹಲವಾರು ದಶಕಗಳಿಂದ ಮುಂದುವರಿಸಿಕೊಂಡು ಬರುತ್ತಾ ಇಡೀ ದೇಶದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ರೀತಿ ಸಮಸ್ಯೆ ಆಗದ ರೀತಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಮಾಜದ ಕುಂದು ಕೊರತೆಗಳ ಕುರಿತು ನಿಗಮದ ಅಧ್ಯಕ್ಷರಿಂದ ಪರಿಶೀಲನೆ, ಅಹವಾಲು ಸ್ವೀಕಾರ:
ಕೊಣನೂರು ಹೋಬಳಿಯ ವಿ.ಜಿ. ಕೊಪ್ಪಲು ಗ್ರಾಮಕ್ಕೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಕೆ. ಗಿರೀಶ್ ಉಪ್ಪಾರ್ ರವರು ಭೇಟಿ ನೀಡಿ ಸಮಾಜದ ಕುಂದು ಕೊರತೆ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಅರಕಲಗೂಡು ಯೋಜನಾ ಪ್ರಾಧಿಕಾರದ ಸದಸ್ಯ ಸೂರ್ಯ, ಚಿಕ್ಕಹಳ್ಳಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಗ್ರಾಮದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.


0 Comments