ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ನಾಲ್ವರು ಕಿಡಿಗೇಡಿಗಳು ಪೊಲೀಸರ ವಾಹನವನ್ನು ಅಡ್ಡಗಟ್ಟಿ, ಅವರಿಗೆ ಧಮ್ಕಿಹಾಕಿ ಕೊಲೆ ಮಾಡುವ ಬೆದರಿಕೆಯನ್ನು ಹಾಕಿರುವ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಐಸಿಸ್ ನಂಟು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಶಂಕಿತ ಉಗ್ರರು ಖಾಕಿ ವಶಕ್ಕೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಗೋಡು ಮಸೀದಿ ಹತ್ತಿರದಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯ ನಿರ್ವಹಣೆ ಮೇರೆಗೆ ತೆರಳಿದ್ದ ಯಾಕೂಬ್ ತಾಂಬೂಲಿ, ಬಸವರಾಜ ಈಟಿ, ಮಂಜುನಾಥ್ ಹಾಗೂ ಚಿದಾನಂದ ಕೆ.ಡಿ ಅವರು ಸಂಜಯ್ ಎಂಬ ಆರೋಪಿಯನ್ನು ಹಿಡಿಯುವ ಸಲುವಾಗಿ ಆತನ ಮನೆಯ ಬಳಿಗೆ ತೆರಳಿದ್ದು, ಈ ವೇಳೆ ಮನೆಯಿಂದ ಯಾರೂ ಹೊರಬರದ ಕಾರಣ ಮನೆಯಲ್ಲಿ ಆರೋಪಿ ಅವಿತಿರುವ ಸಂಶಯ ವ್ಯಕ್ತಪಡಿಸಿ ಮನೆಯನ್ನು ಸುತ್ತುವರೆದು ಕಾರ್ಯಾಚರಣೆಗಳಿದ ಪೊಲೀಸರು, ಹೆಚ್ಚಿನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ನಂತರದಲ್ಲಿ ಮನೆಗೆ ಪ್ರವೇಶಿಸಿದ್ದಾರೆ. ಆದರೆ ಆರೋಪಿ ಕುರಿತಾದ ಯಾವುದೇ ಸುಳಿವುಗಳು ಆತನ ಇರುವಿಕೆ ಪೊಲೀಸರಿಗೆ ಲಭ್ಯವಾಗದೇ ಇದ್ದಾಗ ಈ ಕುರಿತಾಗಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.


ಈ ವೇಳೆ ಇದಕ್ಕಿದಂತೆ ಒಂದು ಆಲ್ಟೊ ಕಾರ್ ಮನೆಯ ಸಮೀಪ ಬಂದಿದ್ದು, ಪೊಲೀಸರನ್ನು ಕಂಡ ಕಾರಿನ ಚಾಲಕ ಹೆಡ್ ಲೈಟ್ ಆಫ್ ಮಾಡಿ ವೇಗವಾಗಿ ರಿವರ್ಸ್ ನಲ್ಲೆ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದು, ಇದನ್ನು ಗಮನಿಸಿದ ಪೊಲೀಸರು ಆರೋಪಿ ಸಂಜಯ್ ನೇ ಇರಬೇಕು ಎಂದು ಕಾರನ್ನು ಹಿಂಬಾಲಿಸಿದ್ದು ಇದನ್ನು ಗಮನಿಸಿದ ಚಾಲಕ ಉದ್ದೇಶಪೂರ್ವಕವಾಗಿ ಪೊಲೀಸರಿದ್ದ ಮೋಟಾರ್ ಬೈಕ್ ಗೆ ಗುದ್ದಿ ಪೆಟ್ಟಾಗುವಂತೆ ಮಾಡಿ ನಂತರದಲ್ಲಿ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂಬುದಾಗಿ ನಾಲ್ವರ ವಿರುದ್ದ ಪೊಲೀಸರೇ ದೂರು ದಾಖಲಿಸಿದ್ದಾರೆ. 

ಕಾರಿನಲ್ಲಿದ್ದ ಆರೋಪಿಗಳನ್ನು ದೃಶ್ಯ, ಯದುನಂದನ, ಶ್ರವಣ, ಮಂಜುನಾಥ ಎಂದು ಗುರುತಿಸಲಾಗಿದ್ದು ಆರೋಪಿತರು ಪೊಲೀಸರನ್ನು ಎಳೆದಾಡಿ ಕೈಯಿಂದ ಹಲ್ಲೆ ಮಾಡಿ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲ, ಯಾರ ಮಾತನ್ನು ಕೇಳಿ ನೀವು ಏನು ಕರ್ತವ್ಯ ನಿರ್ವಹಿಸುತ್ತೀರಾ ಎಂಬುದಾಗಿ ಮತ್ತು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. 

ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತಾಗಿ ಮುಂದಿನ ಕ್ರಮಕ್ಕೆ ಅನುವು ಮಾಡಿದ್ದಾರೆ.