ಚಿಕ್ಕಮಗಳೂರು:
ಚಿಕ್ಕಮಗಳೂರಿನಲ್ಲಿ ಜೋಡೆತ್ತಿನ ಸ್ಪರ್ಧೆ ಆನಂದಿಸಿದ ಜನರು :
ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಜೋಡೆತ್ತಿನ ಸ್ಪರ್ಧೆ ನಡೆಸಿ ಸಂಭ್ರಮಿಸಿದ್ದಾರೆ. ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಿಂದ 93 ಜೋಡಿ ಎತ್ತುಗಳು 2ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಎತ್ತುಗಳು ನಾಮುಂದು, ತಾಮುಂದು ಎಂದು ಓಡುತ್ತಿದ್ದರೆ ಸ್ಪರ್ಧೆ ಪ್ರಿಯರು ಈ ದೃಶ್ಯವನ್ನು ನೋಡಿ ಖುಷಿ ಪಟ್ಟರು. ಚಿಕ್ಕಮಗಳೂರು ನಗರದಲ್ಲಿ ನಡೆದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಾನಾ ಕೆಡೆಗಳಿಂದ ಸ್ಪರ್ಧೆಗೆ ಬಂದಿದ್ದ ಎತ್ತುಗಳನ್ನು ನೋಡಲು ಗ್ರಾಮದ ಜನ ಸೇರಿದ್ದರು. ಶುರುವಿನಿಂದ ಎಂಡ್ ಪಾಯಿಂಟ್ವರೆಗೂ ಜೋಡೆತ್ತಿನ ಸ್ಪರ್ಧೆಯನ್ನು ನೋಡಿದ ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದರು.
ಅನಾರೋಗ್ಯ ಪೀಡಿತ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಲು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು :
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದ 85 ವರ್ಷದ ವೆಂಕಮ್ಮ ಅವರ ಮನೆಗೆ ರಸ್ತೆ ಸಂಪರ್ಕದ ಸೌಲಭ್ಯವಿಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲು ಮನೆಯಿಂದ ಜಮೀನಿನ ಕಾಲು ದಾರಿಯಲ್ಲಿ ಜೋಳಿಗೆಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲಾಗಿದೆ. ವೃದ್ಧೆಯನ್ನು ಜೋಳಿಗೆಯಲ್ಲಿ ಕೂರಿಸಿ ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದ್ದು 2021 ರಲ್ಲಿಯೇ ರಸ್ತೆಯಿರಲಿಲ್ಲ. ರಸ್ತೆಗಾಗಿ ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದರು. ಸಚಿವ ಆರ್ ಆಶೋಕ್, ಜಿಲ್ಲಾಧಿಕಾರಿಗೂ ಪದೇ ಪದೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ರಸ್ತೆ ನಿರ್ಮಾಣವಾಗಿಲ್ಲ. ಇಲ್ಲಿನ ಪರಿಸ್ಥಿತಿ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಜಿಲ್ಲಾಡಳಿತ ಮಾತ್ರ ಸ್ಪಂದಿಸಿಲ್ಲವಂತೆ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಮಲೆನಾಡಿಗರನ್ನು ಉಳಿಸಿ ಬೃಹತ್ ಪ್ರತಿಭಟನೆ :
ಮಲೆನಾಡಿನ ಜನರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಪರಿಹಾರ ದೊರಕಿಸುವ ಸಲುವಾಗಿ ಸರ್ಕಾರದ ಗಮನ ಸೆಳೆಯಲೆಂದು ಮಲೆನಾಡು ಜನಪರ ಒಕ್ಕೂಟವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 20ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಬಾರಿ ಮಳೆಯಿಂದ ಎದುರಾಗಿರುವ ನಷ್ಟಕ್ಕೆ ಸೂಕ್ತವಾದ ಪರಿಹಾರವನ್ನು ಕ್ಷಿಪ್ರಗತಿಯಲ್ಲಿ ಒದಗಿಸಬೇಕು, ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಮಲೆನಾಡನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು. ಎಲೆಚುಕ್ಕಿ ರೋಗಕ್ಕೆ ಲಸಿಕೆ ಸಂಶೋಧಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಾಗವನ್ನು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಬೇಕು. ಹಾಲಿನ ಘಟಕ ಸ್ಥಾಪಿಸಿ ಕೆಎಂಎಫ್ ಸಂಪರ್ಕ ಕಲ್ಪಿಸಬೇಕು. ಪರಿಸರ ಸೂಕ್ಷ್ಮ ವಲಯ, ಹುಲಿ ಯೋಜನೆ ಇತ್ಯಾದಿಗಳಿಂದ ಆಗುವ ತೊಂದರೆ ತಪ್ಪಿಸಬೇಕು. ಸೆಕ್ಷನ್ 4 ವಾಪಸ್ ಪಡೆಯಬೇಕು, ಏಪ್ರಿಲ್ 15ಅನ್ನು ಮಲೆನಾಡು ದಿನವನ್ನಾಗಿ ಆಚರಿಸಬೇಕು ಎನ್ನುವುದು ಸೇರಿ ಇನ್ನೂ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರ ಸೂಕ್ತವಾದ ನಿರ್ಣಯಗಳನ್ನು ಕೈಗೊಳ್ಳಬೇಕೆಂಬ ಒತ್ತಾಯವನ್ನು ಸರ್ಕಾರಕ್ಕೆ ಮಾಡಲಾಗುತ್ತದೆ ಎಂಬುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಹೋರಾಟವನ್ನು ಮತ್ತಷ್ಟು ಬಲಯುಕ್ತವನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಹೋರಾಟಕ್ಕೆ ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಮಲೆನಾಡು ಭಾಗದ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ, ಮಲೆನಾಡಿನ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪಟ್ಟಿ ಮಾಡಿ, ಮನವಿ ಪತ್ರವನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಸರ್ಕಾರಕ್ಕೆ ಸಲ್ಲಿಸಲಾಗುವ ಮನವಿ ಪತ್ರಕ್ಕೆ ಸಹಿ ಸಂಗ್ರಹ ಕೂಡ ನಡೆದಿದ್ದು ಅನೇಕ ಸಂಘಟನೆಗಳು ಪೂರಕವಾದ ಬೆಂಬಲವನ್ನು ಈ ಹೋರಾಟಕ್ಕೆ ಸೂಚಿಸಿದೆ. ನಾಳೆ (ಸೆ.20 ) ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ನಡೆಯುವ ಈ ಪ್ರತಿಭಟನೆಯಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿರುವ ಮಲೆನಾಡಿನ ಮೂಲ ನಿವಾಸಿಗಳು, ಮಲೆನಾಡಿನ ಉನ್ನತಿಗಾಗಿ ಬಯಸುವ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿ ಮನವಿ ಮಾಡಿದೆ.
ಹಾಸನ:
ಪ್ರೀತಮ್ ಗೌಡ ಓರ್ವ ಮಾದರಿ ಶಾಸಕ:
ಶಾಸಕ ಪ್ರೀತಂ ಜೆ. ಗೌಡ ಒಬ್ಬ ಶಾಸಕರಾಗಿ ಈ ಭಾಗದಲ್ಲಿ ಮಾಡಿರುವ ಕೆಲಸ ಉಳಿದ ಶಾಸಕರಿಗೆ ಮಾದರಿಯಾಗಿ ಅವರು ಕೂಡ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಸನ ಕ್ಷೇತ್ರದ ಅಭಿವೃದ್ಧಿಗೆ ಬಹಳ ಆಡಚಣೆ ಇದ್ದರೂ ರಸ್ತೆ ಬದಿ ವ್ಯಾಪಾರಿಗಳಿಗೆ ಉತ್ತಮ ಪುಡ್ ಕೋರ್ಟ್ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಮುಂದೆ ಶಿವಮೊಗ್ಗದಲ್ಲಿ ನಾನು ಇದೆ ರೀತಿ ಅಭಿವೃದ್ದಿ ಮಾಡುತ್ತೇವೆ. ಪ್ರೀತಂಗೆ ಉತ್ತಮ ಭವಿಷ್ಯವಿದ್ದು, ಶೇಕಡಾ 100 ರಷ್ಟು ಮುಂದಿನ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂದು ಬಿಎಸ್ವೈ ಭವಿಷ್ಯ ನುಡಿದರು. ಹಾಸನ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಸಂಘಟನೆ ಮಾಡಲಾಗುವುದು. ಅಧಿವೇಶನ ಮುಗಿದ ಮೇಲೆ ಎರಡು ತಂಡ ಮಾಡಿಕೊಂಡು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ 140 ಸೀಟುಗಳಲ್ಲಿ ಜಯಗಳಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಗದ್ದುಗೆ ಏರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕಾಡಾನೆ ದಾಳಿಗೆ ರೈತ ಕಂಗಾಲು:
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಹಳ್ಳಿಗಳ ಜನರು ಕಂಗಾಲಾಗಿದ್ದಾರೆ. ಕಾಡಾನೆಯಿಂದ ಶಾಶ್ವತ ನೆಮ್ಮದಿ ಕೊಡಿಸುವಂತೆ ಹಳ್ಳಿ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.ಹಲಸುಲಿಗೆ, ಮಠಸಾಗರ, ಉದೇವಾರ, ಜಾನೇಕೆರೆ, ಸತ್ತುಗಾಲ್, ಹಳೇ ಬೇಲೂರು, ಸುಂಡೇಕೆರೆ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿವೆ. ಮಳೆಗಾಲ ಪ್ರಾರಂಭ ಆಯಿತೆಂದರೆ ಸಾಕು, ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಸವಾಲಾಗುತ್ತಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅತಿವೃಷ್ಟಿ ಹಾನಿ; ಪರಿಹಾರ ನೀಡುವಂತೆ ಆಗ್ರಹ :
ಹಾಸನ: ತಾಲೂಕಿನ ತೇಜೂರು, ಶಂಕದ ಕೊಪ್ಪಲು, ಆಲದಹಳ್ಳಿ, ಕಂಚ ಮಾರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನಾದ್ಯಂತ ಬೆಳೆಯುವ ಆಲೂಗಡ್ಡೆ, ಶುಂಠಿ, ಜೋಳ, ಕೋಸು, ಟೊಮಾಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಳೆದುಕೊಂಡು ರೈತರ ಬದುಕು ಮೂರಾಬಟ್ಟೆಯಾಗಿದ್ದು ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಈ ವರ್ಷ ಸುರಿದ ಭಾರಿ ಮಳೆಯಿಂದ ಒಂದೆಡೆ ಮನೆ, ಆಸ್ತಿ ಪಾಸ್ತಿ, ಇನ್ನೊಂದೆಡೆ ಜೀವನಕ್ಕೆ ಆಧಾರವಾಗಿರುವ ಬೆಳೆ ಕಳೆದುಕೊಂಡು ಜನತೆ ಕಂಗಾಲಾಗಿದ್ದಾರೆ. ಆಡಳಿತಾರೂಢ ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಜನಸ್ಪಂದನದ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿರುವುದು, ಜನರ ಕಷ್ಟ ಆಲಿಸಬಿಕಿದ್ದ ಜನಪ್ರತಿನಿಧಿಗಳು ನೃತ್ಯ ಮಾಡಿ ಖುಷಿ ಪಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು. ಅತಿವೃಷ್ಟಿ ಹಾನಿ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ. ಜಿಲ್ಲಾಧಿಕಾರಿಗಳು ಕೂಡಲೇ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ ಸರಕಾರಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಇಲ್ಲವಾದರೆ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಚೇತರಿಸಿಕೊಳ್ಳುವ ಮುನ್ನವೇ, ಈ ವರ್ಷದ ಅತಿಯಾದ ಮಳೆ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಕೂಡಲೇ ಸರ್ಕಾರ ಅತಿವೃಷ್ಟಿ ಹಾನಿ ಸಮಗ್ರ ವರದಿ ಪಡೆದು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಡಗು:
ಕೊಡಗು ರಕ್ಷಣೆಗೆ ಒಕ್ಕೊರಲ ಆಗ್ರಹ :
ಕೊಡಗು ಜಿಲ್ಲೆಯ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ, 25 ವರ್ಷಗಳಿಂದ ಇಬ್ಬರು ಜನಪ್ರತಿನಿಧಿಗಳು ಸತತವಾಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರೂ ಜನರ ಕನಿಷ್ಠ ಸಮಸ್ಯೆಗಳೂ ನೀಗಿಲ್ಲ ಎಂದು ಕೊಡಗು ಬಚಾವೋ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಸುನ್ನಿ ಸೊಸೈಟಿ ಫೆಡರೇಷನ್ ಅಧ್ಯಕ್ಷ ಸಾಫೀ ಸಹೀದ್ ಮಾತನಾಡಿ, ಜಿಲ್ಲೆಯನ್ನು ಧರ್ಮ ರಾಜಕಾರಣ ಮತ್ತು ಮತೀಯವಾದದಿಂದ ಪಾರು ಮಾಡಬೇಕಿದೆ. ಅಭಿವೃದ್ಧಿಪಥದತ್ತ ಕೊಂಡೊಯ್ಯವಲ್ಲಿ ವಿಫಲರಾಗಿರುವ ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವುದು ಶೋಭೆ ತರುವಂತದ್ದಲ್ಲ. ದೇಶದ ಬಹುತ್ವದ ಇತಿಹಾಸ ಅರಿಯದ ಯುವಜನಾಂಗ ರಾಜಕಾರಣಿಗಳ ಪ್ರಚೋದನೆಗೆ ಒಳಗಾಗಿ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿಯಾದ ಮಾರ್ಗಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಸಂತ ಮೈಕಲರ ಚರ್ಚ್‌ನ ಧರ್ಮಗುರು ಜಾರ್ಜ್ ದೀಪಕ್ ಮಾತನಾಡಿ, ನಮ್ಮಲ್ಲಿ ಎಲ್ಲ ಧರ್ಮಗಳಿವೆ. ಆದರೆ, ಮಾನವ ಧರ್ಮ ಮರೆಯಾಗಿದೆ. ಇದೇ ಎಲ್ಲ ಸಂಘರ್ಷಗಳಿಗೂ ಮೂಲಕಾರಣವಾಗಿದೆ ಎಂದು ತಿಳಿಸಿದರು.
ದಸರಾ ಆಚರಣೆ ಕುರಿತು ಬಿಸಿ ನಾಗೇಶ್ ಸಲಹೆ :
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದ್ದು, ಸಂಪ್ರದಾಯದಂತೆ ದಸರಾ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಸಲಹೆ ನೀಡಿದರು.ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಈ ಹಿಂದಿನಂತೆ ದಸರಾವನ್ನು ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ವಿವಿಧ ಉಪ ಸಮಿತಿಗಳು ಸೇರಿದಂತೆ ಕಾಲ ಕಾಲಕ್ಕೆ ಸಭೆ ಆಯೋಜಿಸಿ, ದಸರಾ ಯಶಸ್ಸಿಗೆ ಶ್ರಮಿಸುವಂತೆ ಸಚಿವರು ಸಲಹೆ ಮಾಡಿದರು. ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಮತ್ತು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಆಗಲಿದ್ದು, ದಸರಾವನ್ನು ಸಂಪ್ರದಾಯದಂತೆ ಆಯೋಜಿಸುವಂತಾಗಬೇಕು ಎಂದರು.


0 Comments