ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕುತ್ತಿಗೆಗೆ ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ನಡೆದಿದೆ.

ಮೈತಾಡಿ ಗ್ರಾಮದ ಶರತ್ ಪೂವಯ್ಯ (36) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶರತ್​ ಪೂವಯ್ಯ ಸಿಂಗಲ್ ಬ್ಯಾರಲ್​ ಗನ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸಂಬಂಧ ಸಂಬಂಧಿಕರು ಅತೀವ ನೋವನ್ನು ವ್ಯಕ್ತಪಡಿಸಿದ್ದಾರೆ.


ಅಂಗಾಂಗ ದಾನ ಮಾಡಿದ ರಕ್ಷಿತಾ ಕುಟುಂಬಕ್ಕೆ 08 ಲಕ್ಷ ರೂಗಳ  ಪರಿಹಾರ ಘೋಷಿಸಿದ ಸರ್ಕಾರ : 

ಚಿಕ್ಕಮಗಳೂರು: ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಕುಟುಂಬಕ್ಕೆ ರಾಜ್ಯಸರ್ಕಾರ ಎಂಟು ಲಕ್ಷ ರೂಪಾಯಿ ಹಣದ ಪರಿಹಾರವನ್ನು ಘೋಷಣೆ ಮಾಡಿದೆ.

ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ನಡೆಸುತ್ತಿದ್ದ 18 ವರ್ಷದ ಯುವತಿ, ಸರ್ಕಾರಿ ಬಸ್ಸಿನಿಂದ ಇಳಿಯುವಾಗ ಆಯ ತಪ್ಪಿಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

18 ವರ್ಷದ ರಕ್ಷಿತಾ ಪೋಷಕರು ಆಕೆಯ ಸಾವಿನ ನೋವಿನಲ್ಲೂ ಎಲ್ಲಾ ಅಂಗಾಂಗಗಳನ್ನ ದಾನ ಮಾಡಿದ್ದರು. ಆಕೆಯ ಒಂಬತ್ತು ಅಂಗಾಂಗಳಿಂದ 9 ಜನರ ಜೀವ ಉಳಿದಿದೆ.

ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಗೌರವಯುತವಾಗಿ ಎಂಟು ಲಕ್ಷ ಹಣವನ್ನು ಸರ್ಕಾರ ನೀಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಹಣವನ್ನು ಸರ್ಕಾರ ಮಂಜೂರು ಮಾಡಿದೆ.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡುಚಿ ಶಾಸಕ ಪಿ.ರಾಜೀವ್ ಕಡೂರಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಮನೆಗೆ ಭೇಟಿ ನೀಡಿ ತಾಂಡ್ಯ ಅಭಿವೃದ್ಧಿ ನಿಗಮದ ಒಂದು ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿಯ 2 ಲಕ್ಷ ಒಟ್ಟು ಮೂರು ಲಕ್ಷ ಹಣದ ಚೆಕ್ ನೀಡಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿ ಪರಿಹಾರ ನಿಧಿಯ 5 ಲಕ್ಷದ ಚೆಕ್ ನೀಡಲಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ. 

ತನ್ನ ನಂತರವೂ ಅನೇಕರ ಬಾಳಿಗೆ ಬೆಳಕಾದ ಕಿರಿಯ ವಯಸ್ಸಿನಲ್ಲೇ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ ಗೆಳತಿಯನ್ನು ನೆನೆದು ಸ್ನೇಹಿತೆಯರು, ಕಾಲೇಜಿನ ಪ್ರಾಚಾರ್ಯರು, ಊರಿನವರು ಅತೀವವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯವೇ ಈ ನಿರ್ಧಾರವನ್ನು ಕೈಗೊಂಡ ಪೋಷಕರಿಗೆ ಶ್ಲಾಘನೆ ವ್ಯಕ್ತಪಡಿಸಿದೆ.