ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸರ್ಪಕ್ಕೆ ಮುತ್ತಿಡಲು ಹೋದ ಉರಗ ರಕ್ಷಕನೊಬ್ಬ, ಸರ್ಪದಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಅಲೆಕ್ಸ್‌ ಎಂಬಾತ ನಾಗರಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಉರಗರಕ್ಷಕ. ಹಾವನ್ನು ಹಿಡಿದು ಅದಕ್ಕೆ ಮುತ್ತಿಡಲು ಮುಂದಾಗಿದ್ದ ತಕ್ಷಣ ಹಾವು ತಿರುಗಿ ತುಟಿಗೆ ಕಚ್ಚಿದೆ. ವಿಷದ ಪ್ರಮಾಣ ನಾಗರಹಾವಿನಲ್ಲಿ ಹೆಚ್ಚಿರುವುದರಿಂದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ಒಳಪಡಿಸಲಾಗಿದೆ. 


ಭದ್ರಾವತಿಯ ಅಲೆಕ್ಸ್‌ ಹಾಗೂ ರೋನಿ ಎಂಬುವವರು ಉರಗ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಭದ್ರಾವತಿಯ ಬೊಮ್ಮನಕಟ್ಟೆ ಮದುವೆ ಮನೆಯಲ್ಲಿ ಎರಡು ನಾಗರ ಹಾವುಗಳು ಒಟ್ಟಿಗೆ ಕಾಣಿಸಿಕೊಂಡಿದ್ದವು. ಈ ವೇಳೆ ಹಾವು ಹಿಡಿದು ಅಲೆಕ್ಸ್‌ ಎಂಬಾತ ಅದಕ್ಕೆ ಮುತ್ತು ಕೊಡಲು ಮುಂದಾಗಿದ್ದಾನೆ. ಈ ವೇಳೆ ಹಾವು ತಿರುಗಿ ತುಟಿಗೆ ಕಚ್ಚಿದೆ. ನಂತರ ಹಾವುಗಳನ್ನು ಕಾಡಿಗೆ ಬಿಟ್ಟು ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಉರಗ ರಕ್ಷಕ, ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದಾನೆ. ಅಲೆಕ್ಸ್‌ ಯಾವುದೇ ತೊಂದರೆಯಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಎಷ್ಟೇ ಅನುಭವಗಳಿದ್ದರೂ ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕುವ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮುಂದುವರೆಯುವುದು ಸೂಕ್ತ.