ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನಗಳು ರಸ್ತೆಯ ಮಧ್ಯದಲ್ಲಿ ಮಲಗಿದ್ದ ಬಿಡಾಡಿ ದನಗಳ ಮೇಲೆ ಹರಿದ ಪರಿಣಾಮ ಹಸುಗಳು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿ ಹೆಚ್ಚು ದನಗಳು ಸಾವನ್ನಪ್ಪುತ್ತಿದ್ದು ಇಂದು ಕೂಡ ಬೆಳಗ್ಗಿನ ಜಾವ 3 ರಿಂದ 4 ಗಂಟೆಗಳ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಹಸುಗಳು ಸಾವನ್ನಪ್ಪಿದೆ.
ಬಿಡಾಡಿ ದನಗಳು ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಮಲಗಿದ್ದವು. ಈ ವೇಳೆ ದನಗಳ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಸ್ಥಳದಲ್ಲೇ ಮೂರು ಹಸುಗಳು ಮೃತಪಟ್ಟಿದೆ.
ಈ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವವರಿಗೆ ಇದರಿಂದಾಗಿ ತೊಂದರೆಯಾಗುತ್ತಿದ್ದು, ಧರ್ಮಸ್ಥಳ ಹಾಗೂ ಮಂಗಳೂರು ಮತ್ತು ಹೊರನಾಡು ಶೃಂಗೇರಿ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಈ ಮಾರ್ಗವಾಗಿದೆ. ಈ ರಸ್ತೆಯಲ್ಲಿ ಪ್ರವಾಸಿಗರ ಸಾವಿರಾರು ವಾಹನಗಳು ದಿನನಿತ್ಯ ಸಂಚಾರ ನಡೆಸಲಿದ್ದು, ರಾತ್ರಿಯ ವೇಳೆ ಜನರು ಆತಂಕದಿಂದ ಪ್ರಯಾಣ ನಡೆಸುವಂತಾಗಿದೆ.
ಕೆಲವು ದನಗಳಿಗೆ ವಾರಸುದಾರರು ಇದ್ದರೂ ಕೂಡ ದನಗಳನ್ನು ಕಟ್ಟದೇ ಬೇಕಾಬಿಟ್ಟಿ ರಸ್ತೆಯಲ್ಲಿಯೇ ಬಿಟ್ಟಿರುತ್ತಾರೆ ಎಂಬ ಮಾತುಗಳು ಸಹ ಸಾರ್ವಜನಿಕರಿಂದಲೇ ಕೇಳಿ ಬಂದಿದ್ದು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರಾತ್ರಿಯ ವೇಳೆ ಸಂಬಂಧಿಸಿದ ಹಸುಗಳನ್ನು ಕಟ್ಟಿಹಾಕುವುದು ಸೂಕ್ತವಾಗಿದೆ.
ಕಳೆದ ಒಂದು ತಿಂಗಳಿಂದ 50 ಕ್ಕೂ ಹೆಚ್ಚು ದನಗಳ ಮೇಲೆ ಅಪರಿಚಿತ ವಾಹನಗಳು ರಭಸವಾಗಿ ಗುದ್ದಿ ಅಪಘಾತ ಉಂಟುಮಾಡಿರುವುದರಿಂದಾಗಿ ದನಗಳ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಈ ಕುರಿತಾಗಿ ಕ್ರಮಗಳನ್ನು ಕೈಗೊಂಡು, ಬಿಡಾಡಿ ದನಗಳು ಎಲ್ಲೆಂದರಲ್ಲಿ ತಿರುಗಲು ಬಿಡದೇ ಈ ರೀತಿಯ ಅವಘಡಗಳು ಮುಂದಿನ ದಿನಗಳಲ್ಲಿ ಸಂಭವಿಸಿದೆ ಇರುವಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು





0 Comments