ಕಳಸ:(ನ್ಯೂಸ್ ಮಲ್ನಾಡ್ ವರದಿ) ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಕಗ್ಗನಳ್ಳ ಬಳಿ ಮೀನು ಹಿಡಿಯಲು ಹೋದ ಯುವಕ ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ. 

ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ಬಳಿಯ ನಿವಾಸಿ ಹರ್ಷ(24) ಭದ್ರಾ ನದಿಯ ಯನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ದುರ್ದೈವಿ. ತನ್ನ ಇಬ್ಬರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಹರ್ಷ ಮೀನು ಹಿಡಿಯುವ ಸಲುವಾಗಿ ಭದ್ರಾ ನದಿಗೆ ತೆರಳಿದ್ದರು, ಮೀನು ಹಿಡಿಯುವ ಭರದಲ್ಲಿ ಯುವಕ ಹರ್ಷ ನೀರಿಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. 


ಮಧ್ಯಾಹ್ನದಿಂದಲೂ ಆತನ ಶರೀರವನ್ನು ಪತ್ತೆ ಮಾಡುವ ಸಲುವಾಗಿ ಶೌರ್ಯ ವಿಪತ್ತು ತಂಡದ ಸದಸ್ಯರು ಹುಡುಕಾಟ ನಡೆಸಿದ್ದರು. ಸಂಜೆ ಮಲ್ಪೆಯಿಂದ ಬಂದ ಮುಳುಗು ತಜ್ಞ ಈಶ್ವರ್ ನದಿಯಲ್ಲಿ ಹುಡುಕಾಟ ನಡೆಸಿ ಶವ ಪತ್ತೆ ಮಾಡಿದ್ದಾರೆ. 

ಘಟನಾ ಸಂಬಂಧ ಕಳಸ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ.

ಮೂಡಿಗೆರೆ: ಕಳ್ಳಭಟ್ಟಿ ತಯಾರಿಕಾ ಅಡ್ಡೆಮೇಲೆ ದಾಳಿ; ಆರೋಪಿ ಸಹಿತ ಕಳ್ಳಭಟ್ಟಿ ವಶಕ್ಕೆ ಪಡೆದ ಪೊಲೀಸರು

ಮೂಡಿಗೆರೆ: ಅಕ್ರಮ ಕಳ್ಳಭಟ್ಟಿ ತಯಾರಿಕಾ ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯ ಸಹಿತ ಅಪಾರ ಪ್ರಮಾಣದ ಬೆಲ್ಲದಕೊಳೆ ಹಾಗೂ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಲೆಮನೆ ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಖಚಿತ ಮಾಹಿತಿಯನ್ನು ಆಧರಿಸಿದ ಬಾಳೂರು ಠಾಣೆಯ ಪೊಲೀಸರು ಮಲೆಮನೆ ಸುರೇಶ ಎಂಬಾತನನ್ನು ಬಂಧಿಸಿ ಆತನ ಬಳಿ ಇದ್ದ 200 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.



ಈ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅನೇಕ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಈ ವ್ಯಾಪ್ತಿಯಲ್ಲಿ ಎಗಿಲ್ಲದೇ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ಇನ್ ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್, ಸಿಬ್ಬಂದಿಗಳಾದ ರಾಜೇಂದ್ರ, ಜಾಫರ್, ಅಭಿಲಾಷ್, ಪ್ರದೀಪ್, ವಸಂತ್, ಸತೀಶ್ ಭಾಗವಹಿಸಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು