ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಶೃಂಗೇರಿಯ ಮೆಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗಂಗಾಧರಪ್ಪ ಅವರಿಗೆ ಲಭಿಸಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಸಲೆಕೆರೆಯವರಾದ ಡಾ.B.R ಗಂಗಾಧರಪ್ಪ ಅವರು ಶೃಂಗೇರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. 2007 ರಿಂದ ಮೆಣಸೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ವೃತ್ತಿ ಜೀವನ ಅತ್ಯಂತ ಯಶಸ್ವಿಯಾದುದು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೃಂಗೇರಿ ಇದರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿಕೊಂಡು ಬಂದು ಶಾಲೆಯೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿದ ಗರಿಮೆ ಶಿಕ್ಷಕ ಗಂಗಾಧರಪ್ಪ ಅವರದ್ದು. ಯಾವುದೇ ಖಾಸಗೀ ಶಾಲೆಗೂ ಕಡಿಮೆಯಿಲ್ಲದಂತೆ ಮೆಣಸೆಯ ಸರ್ಕಾರಿ ಶಾಲೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ವಿದ್ಯಾರ್ಥಿಗಳ ಉತ್ತಮಭವಿಷ್ಯಕ್ಕಾಗಿ ಲಭಿಸುವಂತೆ ಮಾಡಿರುವ ಶಿಕ್ಷಕ ಗಂಗಾಧರಪ್ಪ ಅವರ ಕಾರ್ಯವನ್ನು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಅಭಿನಂದಿಸಿದ್ದರು.
ಈ ಬಾರಿಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಂಗಾಧರಪ್ಪ ಅವರಿಗೆ ಸಂದಿರುವುದು ಮುಖ್ಯಶಿಕ್ಷಕ ಗಂಗಾಧರಪ್ಪ ಸೇರಿದಂತೆ ಮೆಣಸೆ ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಹೆಮ್ಮೆ ತಂದಿದೆ. ಶಿಕ್ಷಕ ಗಂಗಾಧರಪ್ಪ ಅವರನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಶೃಂಗೇರಿ ತಾಲೂಕು, ಮೆಣಸೆ ಶಾಲಾ ಶಿಕ್ಷಕ ವೃಂದ, SDMC ಸದಸ್ಯರು, ಸ್ಥಳೀಯರು ಅಭಿನಂದಿಸಿದ್ದಾರೆ.
ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿಗೆ ಮೆಣಸೆ ಸರ್ಕಾರಿ ಶಾಲೆ ಆಯ್ಕೆ :
ರಾಜ್ಯದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಶೈಕ್ಷಣಿಕ ನಿರ್ವಹಣೆಯನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಘೋಷಣೆ ಮಾಡಬೇಕೆಂಬುದಾಗಿ ಸರ್ಕಾರದ ಆದೇಶವಿದ್ದು, ಈ ಪ್ರಶಸ್ತಿಗೆ ಅರ್ಹವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಣಸೆ ಆಯ್ಕೆಗೊಂಡಿದೆ.
ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 05 ರಂದು ಬೆಂಗಳೂರಿನ ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ ಬೆಂಗಳೂರು ಇಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಧಾನ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ.
ರಾಜ್ಯದ ಉತ್ತಮ ಶಿಕ್ಷಕ ಹಾಗೂ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಇದೆರಡೂ ಪ್ರಶಸ್ತಿಗಳು ಒಂದೇ ಶಾಲೆ ಹಾಗೂ ಅದೇ ಶಾಲೆಯ ಮುಖ್ಯ ಶಿಕ್ಷಕರಿಗೆ ಲಭಿಸಿರುವುದು ಮೆಣಸೆ ಸರ್ಕಾರಿ ಶಾಲೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಶಾರದೆಯ ನೆಲೆಬೀಡಾದ ಶೃಂಗೇರಿಯಲ್ಲಿ ಈ ರೀತಿಯ ಹೆಚ್ಚಿನ ಸಾಧನೆಗಳನ್ನು ಶಾಲೆ ಹಾಗೂ ಇಲ್ಲಿನ ಶಿಕ್ಷಕರು ಮಾಡುವಂತಾಗಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.






0 Comments