ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯು ಕೃಷಿಕರನ್ನು ಹಾಗೂ ಸಾರ್ವಜನಿಕರನ್ನು ಕಂಗೆಡಿಸಿದೆ. 

ಇದನ್ನೂ ಓದಿ: ಗೋದಾಮಿನಲ್ಲಿರಿಸಿದ್ದ ಕಾಫಿಬೀಜವನ್ನು ಕಳ್ಳತನ ನಡೆಸಿದ್ದ ಆರೋಪಿಗಳು ಪೊಲೀಸರ ಬಲೆಗೆ; ಲಕ್ಷಾಂತರ ಮೌಲ್ಯದ ಕಾಫಿ, ಕೃತ್ಯಕ್ಕೆ ಬಳಸಿದ್ದ ಕಾರ್ ಪೊಲೀಸರ ವಶಕ್ಕೆ

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಕೃಷಿಕರು ಕಷ್ಟಪಟ್ಟು ಬೆಳೆದ ಬೆಳೆ ಭಾರೀ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ. ಕಾಡಾನೆ ನಡೆಸಿದ ದಾಳಿಗೆ ಸಕಲೇಶಪುರ ತಾಲೂಕಿನ ಹಲಸುಲಿಗೆ, ಹಳೇಕೆರೆ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಲಸುಲಿಗೆ ಗ್ರಾಮದ ನಿಖಿಲ್‌, ಮೋಹನ್ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು ಅಂದಾಜು ಹತ್ತು ವರ್ಷದ ಕಾಫಿ ಗಿಡ, ಬೈನೆ ಮರಗಳನ್ನು ಮುರಿದು ನಾಶ ಮಾಡಿವೆ. 


ಹಳೇಕೆರೆ ಗ್ರಾಮದ ವೆಂಕಟೇಶ್ ಎಂಬುವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಕಾಡಾನೆಗಳು ಓಡಾಡಿ ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಸಸಿಗಳನ್ನು ಸಂಪೂರ್ಣ ತುಳಿದು ಹಾಕಿದೆ. ಒಂದೆಡೆ ಮಳೆಯಿಂದ ಬೆಳೆ ನಾಶವಾಗಿದ್ದರೆ, ಮತ್ತೊಂದೆಡೆ ಗಜಪಡೆ ಹಾವಳಿಯಿಂದ ಉಳಿದಿರುವ ಬೆಳೆಯೂ ಮಣ್ಣು ಪಾಲಾಗಿದೆ. ಈ ಭಾಗದ ಕಾಫಿಬೆಳೆಗಾರರು ಕಂಗಾಲಾಗಿ ಹೋಗಿದ್ದು, ಬೆಳೆ ಹಾನಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲದ ರೀತಿಯಲ್ಲಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕುರಿತಾಗಿ ಕ್ರಮಗಳನ್ನು ಕೈಗೊಂಡು ಕೃಷಿಕರಿಗೆ ನೆರವಾಗಬೇಕು ಎಂಬ ಆಗ್ರಹವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.