ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗಿರಿಶೃಂಗಗಳ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿಯ ಅದ್ದೂರಿ ಆಚರಣೆ, ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದೆ. 

ನವರಾತ್ರಿಯ ಮೂರನೇ ದಿನವಾದ ಇಂದು ಶಾರದಾದೇವಿಯು ವೃಷಭ ವಾಹನ ಅಲಂಕಾರದಲ್ಲಿ ಅಂದರೆ ಮಾಹೇಶ್ವರಿ ಅಲಂಕಾರದಲ್ಲಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ ದೇವಿ. 

ವೃಷ ಎಂದರೆ ಪುಣ್ಯ, ಕೈಯಲ್ಲಿ ತ್ರಿಶೂಲ ಧರಿಸಿ ವೃಷಭ ವಾಹನದ ಮೇಲೆ ಚಂದ್ರಕಲಾ ವಿಭೂಷಿತಳಾಗಿ ಅಲಂಕೃತಗೊಂಡಿರುವ ಮಹೇಶ್ವರನ ಅರ್ಧಾಂಗಿ ದೇವಿಯು ಭಕ್ತರಿಗೆ ಪುಣ್ಯ ಲಭಿಸುವಂತೆ ಅನುಗ್ರಹಿಸುತ್ತಾಳೆ ಎಂಬುದಾಗಿ ಪ್ರತೀತಿಯಿದೆ. 

ಜಗನ್ಮಾತೆ ಶಾರದೆಯ ಪ್ರತಿದಿನದ ಅಲಂಕಾರವನ್ನು ನೋಡಿ ಪ್ರಾರ್ಥಿಸುವ ಸಲುವಾಗಿ ಅನೇಕ ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.


ಪ್ರತಿದಿನ ಸಂಜೆ ಶೃಂಗೇರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಕ್ತರು ಭಜನಾ ತಂಡಗಳ ಜೊತೆಗೆ ಸಂಜೆಯ ರಾಜಬೀದಿ ಉತ್ಸವದಲ್ಲಿ ಭಾಗಿಯಾಗುತ್ತಿದ್ದು, ಉತ್ಸವದ ನಂತರದಲ್ಲಿ ದೇವಿಗೆ ಪೂಜೆ ನೆರವೇರಲಿದ್ದು ನಂತರ ದೇಗುಲದಲ್ಲಿ ದರ್ಬಾರ್ ಕಾರ್ಯಕ್ರಮ ಜರುಗುತ್ತದೆ.

ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ ರಕ್ಷಿತಾಳ ಕುಟುಂಬಕ್ಕೆ 8 ಲಕ್ಷ ರೂಪಾಯಿ ಪರಿಹಾರ ವಿತರಣೆ 

ಚಿಕ್ಕಮಗಳೂರು: ಕಳೆದ ಕೆಲ ದಿನಗಳ ಹಿಂದಷ್ಟೇ ಬಸ್ಸಿನಿಂದ ಅಚಾನಕ್ಕಾಗಿ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡು ನಂತರದಲ್ಲಿ ಅಂಗಾಂಗದಾನ ಮಾಡಿದ್ದ ಮೃತ ರಕ್ಷಿತಾಳ ಕುಟುಂಬಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪರಿಹಾರ ವಿತರಣೆ ನಡೆಯಿತು. 


ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೃತ ಯುವತಿ ರಕ್ಷಿತಾ ಮನೆಗೆ ಭೇಟಿ ನೀಡಿದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ರಕ್ಷಿತಾಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ರಕ್ಷಿತಾಳ ತಂದೆ ತಾಯಿ ಹಾಗೂ ಸಹೋದರರಿಗೆ ಸಾಂತ್ವಾನ ಹೇಳಿದರು. 

ಸರ್ಕಾರದ ವತಿಯಿಂದ ಐದು ಲಕ್ಷ ರೂಗಳ ಪರಿಹಾರ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ವೈಯುಕ್ತಿಕವಾಗಿ ಎರಡು ಲಕ್ಷ ರೂಪಾಯಿ ಹಣ ಹಾಗೂ ತಾಂಡ್ಯ ಅಭಿವೃದ್ದಿ ನಿಗಮದ ವತಿಯಿಂದ ಒಂದು ಲಕ್ಷ ರೂಪಾಯಿ ಒಟ್ಟಾರೆ ಎಂಟು ಲಕ್ಷ ರೂಪಾಯಿ ಹಣ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಇಂದು ವಿತರಿಸಲಾಯಿತು. 

ಈ ಸಮಯದಲ್ಲಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಮೃತಳ ಕುಟುಂಬಸ್ಥರು ಇದ್ದರು.