ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಹಿಂದೆ ನೊಂದ ಬಾಲಕಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಸ್ತುತ ಆರೋಪಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಶಿಕ್ಷೆ ಪ್ರಕಟಗೊಳಿಸಿ ಆದೇಶಿಸಿದೆ.  

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ-2012 ಕಾಯ್ದೆ ಅಡಿಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆ ಈ ಹಿಂದೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಶಂಕಿತ ಉಗ್ರರ ತನಿಖೆಯಿಂದ ಸ್ಫೋಟಕ ಮಾಹಿತಿ ಬಹಿರಂಗ | ರಾಷ್ಟ್ರಧ್ವಜ ದಹನ, ಕಾಫೀರರ ವಿರುದ್ಧ ಜಿಹಾದ್, ಬಾಂಬ್ ತಯಾರಿಕೆಗೆ ತಯಾರಿ


ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ವೃತ್ತದ ಸಿಪಿಐ ಜಗನ್ನಾಥ ಹೆಚ್.ಎಂ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ಮಧು ಡಿ.ಎಂ ಬಿನ್ ಸಗನಯ್ಯ ಎಂಬ ಆರೋಪಿಯ ವಿರುದ್ಧ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-01 ಚಿಕ್ಕಮಗಳೂರಿಗೆ ದೋಷರೋಪಣಾ ಪತ್ರ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು (ನಿನ್ನೆ) ದಿನಾಂಕ 23-09-2022 ರಂದು ಈ ಪ್ರಕರಣದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾನ್ಯ ಬಿ.ವೆಂಕಟೇಶ್ FTSC-01 ನ ನ್ಯಾಯಾಧೀಶರು ಚಿಕ್ಕಮಗಳೂರು ಅಂತಿಮ ತೀರ್ಪು ನೀಡಿದ್ದು, CRPC 235(2) ರ ಪ್ರಕಾರ ಆರೋಪಿಗೆ ಕಲಂ 366 ಐಪಿಸಿ ಅಡಿಯಲ್ಲಿ 03 ವರ್ಷ ಸಾಮಾನ್ಯ ಶಿಕ್ಷೆ ಮತ್ತು 5,000/- ರೂ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 2 ½ ವರ್ಷ ಸಾಮಾನ್ಯ ಸಜೆ, ಕಲಂ 342 ಐಪಿಸಿ ಸೆಕ್ಷನ್ ಅಡಿಯಲ್ಲಿ 1,000/- ರೂ ದಂಡ, ತಪ್ಪಿದ್ದಲ್ಲಿ 03 ತಿಂಗಳ ಸಾಮಾನ್ಯ ಸಜೆ, ಹಾಗೂ ಕಲಂ 4(2) ಪೋಕ್ಸೋ ಕಾಯ್ದೆ ಹಾಗೂ ಕಲಂ 376(3) ಐಪಿಸಿ ರ ಪ್ರಕಾರ 20 ವರ್ಷ ಸಜೆ ಮತ್ತು 50,000/- ರೂ ದಂಡ ವಿಧಿಸಿದ್ದು. ದಂಡವನ್ನು ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 05 ವರ್ಷ ಸಾಮಾನ್ಯ ಸಜೆ ವಿಧಿಸಿರುತ್ತದೆ. ಅಂತಿಮ ತೀರ್ಪಿನಲ್ಲಿ ಸಂತ್ರಸ್ಥೆಗೆ ಪರಿಹಾರ ಮೊತ್ತವಾಗಿ 4,00,000/- ರೂ ಪಾವತಿಸಲು ಮಾನ್ಯ ಘನ ನ್ಯಾಯಾಲಯವು ತೀರ್ಪು ನೀಡಿ ಆದೇಶಿಸಿದೆ.

ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದು ಅಂಕಿ ಅಂಶಗಳ ಪ್ರಕಾರ ಜಿಲ್ಲಾ ಕಾರಾಗೃಹದಲ್ಲಿ ಪೋಕ್ಸೋ ಆರೋಪಿಗಳ ಸಂಖ್ಯೆಯೇ ಹೆಚ್ಚು. ಈ ಕುರಿತಾಗಿ ಅರಿವು ಮೂಡಿಸುವ ಕಾರ್ಯಾಗಾರಗಳು ಸಹ ನಡೆಯುತ್ತಿದ್ದು ಇಂತಹ ಕೃತ್ಯಗಳಿಗೆ ಬ್ರೇಕ್ ಬೀಳಬೇಕಿದೆ.