ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ರೈತರ ಜೀವನಾಡಿ ಆಗಿರುವ ಅಡಿಕೆ ಬೆಳೆಗೆ ವಿವಿಧ ಮಾರಕ ರೋಗಗಳು ಬಾಧಿಸುತ್ತಿದೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಇರುವುದು ದುರದೃಷ್ಟಕರ ಈ ಕುರಿತು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಪರಿಹಾರ ಒದಗಿಸದೇ ಇದ್ದಲ್ಲಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕಿಡಿಕಾರಿದ್ದಾರೆ. 

ಅಡಿಕೆ ಬೆಳೆಯು ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ, ಮುಂತಾದ ರೋಗಗಳಿಗೆ ತುತ್ತಾಗಿ ಅಳಿವಿನ ಅಂಚಿನಲ್ಲಿದೆ. ಜಿಲ್ಲೆಯ ಕರೂರು ಹೋಬಳಿ ಬಾರಂಗಿ, ತುಂಬಿ, ಬ್ಯಾಕೊಡು, ನೆಲ್ಲಿಬೀಡು, ಹಾಬಿಗೆ, ನಿಟ್ಟೂರು, ಸಾಗರ ತಾಲೂಕಿನ ಮುಳುಗಡೆ ಪ್ರದೇಶದ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ ಬಿಳಿ ಚಿಕ್ಕಿ, ರೋಗ ಅಥವಾ ಹಿಡಿಕುಂಟೆ ರೋಗ ಬಂದು ತೋಟವೇ ಸರ್ವನಾಶ ಆಗುತ್ತಿದೆ ಇದರಿಂದಾಗಿ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು ಅಧಿಕಾರಿಗಳು ರೈತರ ಗೋಳನ್ನು ಕೇಳದೇ ಇರುವುದು ಅತ್ಯಂತ ದುರಾದೃಷ್ಟಕರ. ಪರಿಹಾರ ಕ್ರಮ ರೋಗದ ನಿಯಂತ್ರಣದ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು, ನೊಂದ ರೈತರಿಗೆ ಸಾಂತ್ವಾನ ಹೇಳಿದರು. 

ಇದನ್ನೂ ಓದಿ: ನವರಾತ್ರಿಯ ಮೂರನೇ ದಿನ ವೃಷಭವಾಹಿನಿಯಾಗಿ ವಿರಾಜಮಾನಳಾದ ಶೃಂಗೇರಿ ಶಾರದೆ

ಕೃಷಿಯನ್ನು ನಂಬಿ ಜೀವನಕಟ್ಟಿಕೊಂಡಂತಹ ಮಲೆನಾಡ ರೈತರ ಈ ಗೋಳನ್ನು ಕೇಳಲು ಇಲ್ಲಿವರೆಗೂ ಇಲ್ಲಿನ ಶಾಸಕರು ಅಧಿಕಾರಿಗಳು ಯಾರು ಪತ್ತೆ ಇಲ್ಲ, ತಕ್ಷಣ ಈ ಸಮಸ್ಯೆಗೆ ಸರ್ಕಾರ ಮತ್ತು ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ ಇದರ ಬಗ್ಗೆ ಗಮನ ಹರಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ಕ್ರಮಕ್ಕೆ ಮುಂದಾಗದೆ ಹೋದಲ್ಲಿ ಈ ಕುರಿತಾಗಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಅವರು ಎಚ್ಚರಿಸಿದರು.


ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಅ.3 ರಂದು ರೈತರ ಸಮಾವೇಶ: 

ಎಲೆಚುಕ್ಕಿ ರೋಗದ ಕುರಿತು ನಿಯಂತ್ರಣಾ ಕ್ರಮ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ಅಕ್ಟೋಬರ್ 3 ರಂದು ತೀರ್ಥಹಳ್ಳಿ ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ರೈತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.



ಈ ಕುರಿತು ಮಾತನಾಡಿದ ಕೃಷಿಕ ಸಮಾಜದ ಮುಖಂಡರು ಮಲೆನಾಡಿನ ಅತೀ ಹೆಚ್ಚು ಮಳೆ ಬೀಳುವ ಗುಡ್ಡಗಾಡಿನ ಪ್ರದೇಶದಲ್ಲಿ ಈಗ ಅಡಿಕೆಗೆ ಎಲೆ ಚುಕ್ಕೆ ರೋಗ ಬಾಧಿಸುತ್ತಿದೆ. ಬೆಳೆ ಕಳೆದುಕೊಳ್ಳುವ ಜೊತೆಗೆ ಅಡಿಕೆ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ. ರೋಗವು ಇಡೀ ಮಲೆನಾಡನ್ನು ವ್ಯಾಪಿಸುತ್ತಿದ್ದು ರೋಗ ನಿಯಂತ್ರಣ ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ಈ ಕುರಿತಾಗಿ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಪರಿಹಾರ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಅಕ್ಟೋಬರ್ 03 ರಂದು ರೈತ ಸಮಾವೇಶ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. 

ಅಕ್ಟೋಬರ್ 3 ರಂದು ತೀರ್ಥಹಳ್ಳಿ ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ರೈತರನ್ನು ಒಗ್ಗೂಡಿಸಿ ಈ ಸಭೆ ನಡೆಯಲಿದ್ದು, ಎಲ್ಲಾ ಕೃಷಿಕರನ್ನು ಒಗ್ಗೂಡಿಸಿ ಚರ್ಚಿಸಲಾಗುತ್ತದೆ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ರೈತರ ಹಕ್ಕೊತ್ತಾಯದ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.