ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಅವಾಂತರಗಳು ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯ ತಡೆಗೋಡೆ ಕುಸಿತಗೊಂಡಿದೆ.


ಎತ್ತರವಾದ ಬೆಟ್ಟ ಹಾಗೂ ಪ್ರಪಾತಗಳಿಂದ ಕೂಡಿರುವ ಚಾರ್ಮಾಡಿ ಘಾಟಿಯ ರಸ್ತೆಯ ತಡೆಗೋಡೆ ಮಳೆಯಿಂದಾಗಿ ಕುಸಿತಗೊಂಡಿದೆ. ಬಿದೃತಳ ಸಮೀಪದಲ್ಲಿ ತಡೆಗೋಡೆ ಹಾಗೂ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ ಎನ್ನಲಾಗಿದೆ. 


ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು ಈ ಹಿಂದೆ ಸುರಿದ ಮಳೆಯು ಮೂಡಿಗೆರೆ ಭಾಗದ ಅನೇಕ ಮನೆಗಳು ಧರೆಶಾಹಿಯಾಗುವಂತೆ ಮಾಡಿತ್ತು. ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಶೃಂಗೇರಿ ಹೊರವಲಯದ ನೇರಳೆಕುಡಿಗೆ ಬಳಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದ ಪರಿಣಾಮ ಸಂಚಾರಕ್ಕೆ ತೀವ್ರ ತರಹದ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಮತ್ತೆ ಆರಂಭವಾಗಿರುವ ಮಳೆಯು ಮಲೆನಾಡಿಗರನ್ನು ಆತಂಕಕ್ಕೆ ದೂಡಿದೆ.
- ತನು ಕೊಟ್ಟಿಗೆಹಾರ, ವರದಿಗಾರರು