ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಸ್ಸಿನಿಂದ ಕೆಳಬಿದ್ದು ಮೆದುಳು ನಿಷ್ಕ್ರಿಯ ಹೊಂದಿದ್ದ ಕಾಲೇಜು ವಿದ್ಯಾರ್ಥಿನಿ ರಕ್ಷಿತಾಳ ಅಂಗಾಂಗ ಕಸಿ ಇಂದು ಪರಿಣಿತ ತಜ್ಞರ ಮೂಲಕ ಯಶಸ್ವಿಯಾಗಿ ನಡೆಯಿತು.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು ಕಣ್ಣು, ಶ್ವಾಸಕೋಶ, ಹೃದಯ ಸೇರಿದಂತೆ ಒಂಬತ್ತು ಅಂಗಗಳನ್ನು ಯುವತಿಯ ದೇಹದಿಂದ ತೆಗೆಯಲಾಗಿದ್ದು ವಿಶೇಷ ಹೆಲಿಕಾಪ್ಟರ್ ಮೂಲಕ ಜೀವಂತ ಹೃದಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆಯಾಗಿದೆ.
ಇದನ್ನೂ ಓದಿ: ಕಾಫಿ ಮಂಡಳಿ ರದ್ದುಪಡಿಸುವಂತೆ ಸದನದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯ
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಈ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಮಗಳನ್ನು ಓದಿಸಬೇಕೆಂಬ ಆಕಾಂಕ್ಷೆಯಿಂದ ಪೋಷಕರು ಚಿಕ್ಕಮಗಳೂರಿನ ಬಸವನಹಳ್ಳಿ ಕಾಲೇಜಿಗೆ ಮಗಳನ್ನು ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಬಸ್ಸಿನಿಂದ ಇಳಿಯುವಾಗ ಕೆಳಗೆ ಬಿದ್ದ ಪರಿಣಾಮ ಯುವತಿಯ ಮೆದುಳು ನಿಷ್ಕ್ರಿಯವಾಗಿದ್ದು ಒಂದೆಡೆ ಈ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಪೋಷಕರು ಇನ್ನೊಂದೆಡೆ ಧೈರ್ಯ ತೆಗೆದುಕೊಂಡು ಮಗಳನ್ನು ಅನೇಕರಲ್ಲಿ ನೋಡುವ ಸಲುವಾಗಿ, ಬೇರೊಬ್ಬರಿಗೆ ಅವಳ ದೇಹದ ಅಂಗಾಂಗಳಿಂದ ಉಪಯುಕ್ತವಾಗಲಿ ಎಂಬ ನಿಟ್ಟಿನಲ್ಲಿ ಆಕೆಯ ಅಂಗಾಂಗ ದಾನಕ್ಕೆ ಮುಂದಾಗಿ ಒಪ್ಪಿಗೆ ಸೂಚಿಸಿದ್ದರು.
ನಿನ್ನೆ ಸಂಜೆಯೇ ಈ ಕಾರ್ಯಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ನುರಿತ ವೈದ್ಯರ ತಂಡ, ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿಕೊಂಡು ಜಿಲ್ಲೆಯಲ್ಲಿ ಚೊಚ್ಚಲ ಬಾರಿಗೆ ಯಶಸ್ವಿಯಾಗಿ ಅಂಗಾಂಗಗಳ ಕಸಿ ಮಾಡಿ ಬೇರೆಡೆಗೆ ರವಾನಿಸಿದೆ.
ಈ ಕುರಿತಾಗಿ ಸಮಾಜದ ಅನೇಕ ಗಣ್ಯರು ಪೋಷಕರ ನಿರ್ಧಾರವನ್ನು ಶ್ಲಾಘಿಸಿದ್ದು, ಒಂದೆಡೆ ಕುಟುಂಬದ ಈ ಉತ್ತಮ ನಿರ್ಧಾರಕ್ಕೆ ಅಭಿನಂದಿಸಿದ್ದರೆ ಇತ್ತ ಅವರ ಸ್ಥಿತಿಯನ್ನು ಕಂಡು ಮರುಗಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಜೀರೋ ಟ್ರಾಫಿಕ್ ವ್ಯವಸ್ಥೆ :
ರಕ್ಷಿತಾ ದಾನ ಮಾಡಿದ ದೇಹದ ಅಂಗಾಂಗಗಳನ್ನು ಜಿಲ್ಲಾಸ್ಪತ್ರೆಯಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಸಾಗಿಸಲು ಆಸ್ಪತ್ರೆಯಿಂದ ಹೆಲಿಪ್ಯಾಡ್ ರವರೆಗೆ ಹಾಗೂ ರಸ್ತೆ ಮೂಲಕ ಮಂಗಳೂರಿಗೆ ಸಾಗಿಸಲು ಚಿಕ್ಕಮಗಳೂರು ಪೊಲೀಸ್ ವತಿಯಿಂದ 2 ಪ್ರತ್ಯೇಕ ಮಾರ್ಗಗಳಲ್ಲಿ ಗ್ರೀನ್ ಕಾರಿಡಾರ್ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಮೂರನೇ ಮಾರ್ಗವಾಗಿ ಚಿಕ್ಕಮಗಳೂರಿನಿಂದ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ದಾನ ಮಾಡಿದ ಅಂಗಾಂಗಗಳನ್ನು ಸಾಗಿಸಲು ಸುಗಮ ಸಂಚಾರ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ್ದರು. ಈ ಮೂಲಕ ಸುಗಮವಾಗಿ ಕ್ಷಿಪ್ರಗತಿಯಲ್ಲಿ ಅಂಗಾಂಗಳ ರವಾನೆಗೆ ಸಹಕರಿಸಿದರು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಂಗಾಂಗಳ ಕಸಿ ಯಶಸ್ವಿಕಾರ್ಯ :
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಕಾರ್ಯ ನಡೆದಿದ್ದು, ಯುವತಿಯ ಅಂಗಾಂಗಗಳು 09 ಜನರಿಗೆ ಉಪಯುಕ್ತವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಜಿಲ್ಲಾಡಳಿತ ಹಾಗೂ ನುರಿತ ವೈದ್ಯರ ತಂಡದ ಸಹಕಾರದೊಂದಿಗೆ ಈ ಕಾರ್ಯ ನೆರವೇರಿದ್ದು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ರಕ್ಷಿತಾ ತನ್ನ ನಂತರವೂ ಅನೇಕರ ಬಾಳನ್ನು ಬೆಳಗಲಿದ್ದಾಳೆ.





0 Comments