ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗೋಮಾಳದ ಪ್ರದೇಶವೇನಾದರೂ ಅರಣ್ಯ ಇಲಾಖೆಗೆ ಸೇರಿದರೆ ಶಾಸಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಕುರಿತು ಶಾಸಕರೇ ನಿನ್ನೆ ಆತಂಕ ವ್ಯಕ್ತಪಡಿಸಿ ಸರ್ಕಾರ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಂತೆ ಅಂತೆಯೇ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದಾರೆ.

ಗೋಮಾಳ, ಕಾನು ಅರಣ್ಯಕ್ಕೆ ಸೇರಿಸುವ ಪ್ರಯತ್ನವು ಇಲಾಖೆಯಿಂದ ನಡೆದಿದೆ, ಇದರಿಂದಾಗಿ ಶೃಂಗೇರಿ ಭಾಗದ ಜನರು ಆತಂಕದಲ್ಲಿದ್ದಾರೆ, ಜಾಗವು ಅರಣ್ಯಕ್ಕೆ ಸೇರಿದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಕಳವಳ ವ್ಯಕ್ತಪಡಿಸಿದರು ಹಾಗೂ ಜನರೇ ಆತಂಕದಲ್ಲಿ ಈ ರೀತಿಯ ಮಾತನ್ನು ಆಡುತ್ತಿದ್ದಾರೆ ಸರ್ಕಾರ ಮಧ್ಯ ಪ್ರವೇಶಿಸಿ ಮಲೆನಾಡು ಭಾಗದಲ್ಲಿರುವ ಸೊಪ್ಪಿನ ಬೆಟ್ಟ, ಗೋಮಾಳಗಳ ಜಾಗಕ್ಕೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ಪರಿಹರಿಸಬೇಕು, ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದ್ದರೂ ಬೆದರಿಕೆ ಹಾಕಿದವರ ಹೆಸರು ಹೇಳಲ್ಲ, ಅವರ ವಿರುದ್ಧ ದೂರನ್ನೂ ದಾಖಲಿಸುವುದಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ದೇಶದ ಮುಸ್ಲಿಮರಿಗಿಂತ ಸಿದ್ದರಾಮಯ್ಯ ಅತ್ಯಂತ ಅಪಾಯಕಾರಿ; ಬಿಜೆಪಿ ಸುದ್ದಿಗೋಷ್ಠಿ | ಶಾರದಾಂಬೆ ದೇಗುಲಕ್ಕೆ ಬುರ್ಖಾ ಧರಿಸಿ ಬರುವವರ ಕುರಿತು ನಿಗಾವಹಿಸುವಂತೆ ಆಗ್ರಹ


ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೇರಿದಂತೆ ಪ್ರಮುಖ ಅಧಿಕಾರಿಗಳಿದ್ದ ಸಭೆಯಲ್ಲಿ ಮಾತನಾಡಿದ ಅವರು ಗೋಮಾಳ ಜಾಗವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ, ಈ ಪ್ರದೇಶಗಳಲ್ಲಿ ವಾಸಿಸುವ ಜನರು ಆತಂಕದಿಂದ ಕೂಡಿದ್ದು ಅವರು ಸಹ ಬದುಕಿನ ಕುರಿತು ಆಲೋಚನೆ ನಡೆಸುತ್ತಿದ್ದಾರೆ ಎಂಬುದಾಗಿ ಶಾಸಕ ಮಲೆನಾಡಿಗರ ಸಮಸ್ಯೆ ಕುರಿತು ಮಾತನಾಡಿದರು.

ಶೃಂಗೇರಿ ತಾಲ್ಲೂಕಿನ ಹಾದಿ ಕೆರೂರು ಸರ್ವೆ ನಂಬರ್ 11ರಲ್ಲಿ 1090 ಎಕರೆ ಪ್ರದೇಶದಲ್ಲಿ 762 ಎಕರೆ ಅರಣ್ಯ, 328 ಎಕರೆ ಗೋಮಾಳ ಇದೆ. ಹಾದಿ ಗ್ರಾಮದ ಸರ್ವೆ ನಂಬರ್ 2ರಲ್ಲಿ 971 ಎಕರೆ ಪ್ರದೇಶದಲ್ಲಿ 734 ಎಕರೆ ಕಾಡು, 234 ಎಕರೆ ಕಾನು ಇದೆ, ತಹಶೀಲ್ದಾರ್ ಅವರು ಮೋಜಣಿ ಮತ್ತು ಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಮೋಜಣಿಯಾಗಿಲ್ಲ ಎಂದು ತಿಳಿಸಿದರು.

ಶಾಸಕರಿಂದ ಮಾಹಿತಿ ಪಡೆದು ತನಿಖೆ ನಡೆಸುತ್ತೇವೆ: ಎಸ್ಪಿ

ಶಾಸಕರಿಗೆ ಬಂದಿರುವ ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಶಾಸಕ ರಾಜೇಗೌಡ ದೂರು ನೀಡಿದರೆ ಉನ್ನತ ತನಿಖೆ ಮಾಡಿಸುತ್ತೇವೆ, ಜನಸೇವೆಯಲ್ಲಿರುವವರಿಗೆ ಇಂತಹ ಹೇಳಿಕೆ ಸಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಭೈರತಿ ಬಸವರಾಜ ಹೇಳಿದರು. ಅಂತೆಯೇ ಕೊಲೆ ಬೆದರಿಕೆ ಕುರಿತಂತೆ ರಾಜೇಗೌಡ ಅವರಿಂದ ದೂರು ಪಡೆದು ತನಿಖೆ ನಡೆಸುತ್ತೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ಈ ಸಂಬಂಧ ಪ್ರತಿಕ್ರಿಯಿಸಿದರು.

ಒಟ್ಟಾರೆ ಶಾಸಕರಿಗೆ ಕೊಲೆ ಮಾಡುತ್ತೇವೆ ಎಂಬ ಬೆದರಿಕೆಗಳು ಬಂದಿರುವುದು ಒಂದೆಡೆ ಆತಂಕಕ್ಕೆ ಕಾರಣವಾಗಿದ್ದರೆ, ಇತ್ತ ಮಲೆನಾಡಿಗರು ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿರುವುದರ ಕುರಿತಾಗಿ ಅದರ ತೀವ್ರತೆಯನ್ನು ಶಾಸಕರೇ ವಿಸ್ತಾರವಾಗಿ ತಿಳಿಸಿ ಪ್ರಕರಣ ದಾಖಲಿಸುವುದು ಬೇಡ ಜನರೂ ಕೂಡ ಆತಂಕದಲ್ಲೇ ಈ ರೀತಿಯಾಗಿ ಮಾತನಾಡಿದ್ದಾರೆ ಎಂದಿರುವುದು, ಗೋಮಾಳ, ಸೊಪ್ಪಿನಬೆಟ್ಟ ಜಾಗಕ್ಕೆ ಸೇರಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಯ ತೀವ್ರತೆಯನ್ನು ತೆರೆದಿಟ್ಟಿದೆ.