ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಮಠ ಹರಿಹರಪುರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕ ಸಾಧಕರನ್ನು ಗುರುತಿಸಿ ಅವರಿಗೆ ಅನುಗ್ರಹ ಪೂರ್ವಕ ಸನ್ಮಾನ ನಡೆಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಮೂಲದ ಐಟಿ ಉದ್ಯೋಗಿ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪುಣ್ಯ ಕ್ಷೇತ್ರವಾದ ಶ್ರೀ ಮಠ ಹರಿಹರಪುರದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಅನುಗ್ರಹಪೂರ್ವಕ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಹುಟ್ಟು ಸಾವು ಈ ಎರಡರ ಮಧ್ಯೆ ಇರುವ ಅನಿಶ್ಚಿತ ಅವಧಿಯನ್ನು ಬದುಕು ಎನ್ನುತ್ತೇವೆ, ಈ ಅವಧಿಯಲ್ಲಿ ಸ್ವಾರ್ಥವನ್ನು ಬಿಟ್ಟು ಪರೋಪಕಾರಕ್ಕಾಗಿಯೇ ಸದಾ ಶ್ರಮಿಸಬೇಕು, ತಾಳ್ಮೆಯಿಂದ ದೊರೆತ ಅವಕಾಶವನ್ನು ಅಥವಾ ಸಾಧನೆಗಾಗಿ ಅವಕಾಶವನ್ನು ಕಲ್ಪಿಸಿಕೊಂಡು ಉತ್ತಮ ಜೀವನವನ್ನು ಸಮಾಜದ ಜೊತೆಗೆ ನಡೆಸುವ ಸಂಕಲ್ಪವನ್ನು ಸಕಲರೂ ಮಾಡಬೇಕೆಂದು ಅನುಗ್ರಹಿಸಿದರು. 


ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ನರಸಿಂಹಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ಹಾಗೂ ರೋಗಿಗಳ ತಪಾಸಣೆ ಆರೈಕೆಯನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವ ಕೊಪ್ಪದ ಪ್ರಶಮನೀ ಆಸ್ಪತ್ರೆಯ ವೈದ್ಯ ಡಾ. ಉದಯಶಂಕರ್ ಅವರನ್ನು ಸನ್ಮಾನಿಸಲಾಯಿತು. ಅಂತೆಯೇ ಡಾ. ಲಕ್ಷ್ಮೀನಾರಾಯಣ, ಡಾ.ರವೀಶ್ ಕಾಮತ್, ಡಾ. ಅಶ್ವಿನ್ ಕುಮಾರ್, ಡಾ. ರಮೇಶ್ ಸೇರಿದಂತೆ ಅನೇಕ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. 

ಈ ವೇಳೆ ರಾಜ್ಯಸಭಾ ಸದಸ್ಯ ಜಗ್ಗೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, KPCC ಪ್ರಮುಖರಾದ ಎಂ.ಬಿ ಪಾಟೀಲ್, ಮಾಜಿ MLC ಗಾಯತ್ರಿ ಶಾಂತೇಗೌಡ, ಹರಿಹರಪುರ ಶ್ರೀ ಮಠದ ಆಡಳಿತಾಧಿಕಾರಿ ಡಾ. B.S ರವಿಶಂಕರ್ ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಮಠದ ಭಕ್ತರು ಉಪಸ್ಥಿತರಿದ್ದರು.