ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐತಿಹಾಸಿಕವಾದ ಕಾಶಿ ವಿಶ್ವನಾಥ ಮಂದಿರದ ವಿವಾದದ ಕುರಿತಾಗಿ ಇಂದು ಶಿವಲಿಂಗದ ದರ್ಶನ ಹಾಗೂ ಪೂಜೆಗೆ ಸಂಬಂಧಿಸದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಇಂದು ಸಂಭ್ರಮಾಚರಣೆ ನಡೆಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ನದಿಯ ತಟದಲ್ಲಿ ನಿಂತ ಕಾರು, ಬಚಾವಾದ ಚಾಲಕ
ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ಐವರು ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ. ಐವರು ಮಹಿಳೆಯರಿಂದ ಆರಂಭವಾದ ಹೋರಾಟ ಶೀಘ್ರದಲ್ಲೇ ಯಶಸ್ಸನ್ನು ಕಾಣುತ್ತದೆ, ಅಯೋಧ್ಯೆ ನಮ್ಮದಾಯಿತು, ಇಂದೂ ಸಹ ತೀರ್ಪು ಹಿಂದೂಗಳ ಪಾಲಿಗೆ ಲಭಿಸಿದೆ. ಮುಂದಿನ ದಿನಗಳಲ್ಲಿ ಮಥುರಾ ಹೋರಾಟವನ್ನು ನಡೆಸಿ ಅದನ್ನೂ ಪಡೆದೇ ಪಡೆಯುತ್ತೇವೆ - ಶ್ಯಾಮ್ ವಿ ಗೌಡ, ಬಜರಂಗದಳ ಸಂಚಾಲಕ, ಚಿಕ್ಕಮಗಳೂರು
ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ನಗರದ ಜ್ಞಾನವಾಪಿ ಮಸೀದಿಯೊಳಗೆ ಪೂಜಿಸುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು ದಾಖಲಿಸಿರುವ ಪ್ರಕರಣವನ್ನು ಆಲಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ವಾರಣಾಸಿಯ ಹಿರಿಯ ನ್ಯಾಯಾಧೀಶರ ನ್ಯಾಯಾಲಯವು ಇಂದು ನಿರ್ಧರಿಸಿದೆ. ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಜ್ಞಾನವಾಪಿ ಮಸೀದಿಯ ಒಳಗೆ ಸಮೀಕ್ಷೆಗೆ ಕಾರಣವಾದ ಮಹಿಳೆಯರ ಪ್ರಕರಣವು ವಿಚಾರಣೆ ಮುಂದುವರಿಯುತ್ತದೆಯೇ ಅಥವಾ ಅದು ಯಾವುದೇ ಕಾನೂನು ಸ್ಥಾನಮಾನವನ್ನು ಹೊಂದುವುದಿಲ್ಲವೇ ಎಂಬ ಕುರಿತಾಗಿ ತಿಳಿಸಿದೆ.
ಪೂಜೆಗೆ ಅವಕಾಶ ಕೋರಿದ್ದರ ಕುರಿತಾಗಿ ಅರ್ಜಿ ವಿಚಾರಣೆ ನಡೆಸಲು ಅರ್ಹ ಎನ್ನುವುದನ್ನು ಕೋರ್ಟ್ ತಿಳಿಸಿದ್ದು. ಈ ಹಿನ್ನೆಲೆ ಸಂತೋಷ ವ್ಯಕ್ತಪಡಿಸಿರುವ ಬಜರಂಗದಳದ ಕಾರ್ಯಕರ್ತರು ಜಿಲ್ಲಾಕೇಂದ್ರ ಚಿಕ್ಕಮಗಳೂರಿನಲ್ಲಿ ಪಟಾಕಿ ಸಿಡಿಸಿ, ಜೈ ಶ್ರೀರಾಮ್ ಘೋಷಣೆಯನ್ನು ಕೂಗಿ ವಿಜಯೋತ್ಸವವನ್ನು ಆಚರಿಸಿದ್ದಾರೆ.
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಸಂಭ್ರಮವನ್ನು ವ್ಯಕ್ತಪಡಿಸಿದರು. ಪ್ರಾಥಮಿಕ ಹಂತದಲ್ಲೇ ಜಯ ನಮ್ಮದಾಗಿದೆ, ಪುಣ್ಯಸ್ಥಳ ಮಥುರಾ ಹೋರಾಟ ಸಹ ನಡೆಸುತ್ತೇವೆ, ಅದನ್ನೂ ಪಡೆಯುತ್ತೇವೆ ಎಂದರು.





0 Comments