ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯ ಮೃತ ದೇಹವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೇ ಎರಡು ದಿನಗಳ ಕಾಲ ಮೃತದೇಹದ ಅಂತ್ಯಕ್ರಿಯೆ ನಡೆಸದೇ ಮನೆಯಲ್ಲೇ ಇಟ್ಟುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್.ಬೊಮ್ಮೇನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: ಜಯಪುರ: ಅಕ್ರಮ ಗೋಮಾಂಸ ಅಡ್ಡೆ ಮೇಲೆ ಪೊಲೀಸರ ದಾಳಿ; ಭಾರೀ ಪ್ರಮಾಣದ ಗೋಮಾಂಸ ವಶಕ್ಕೆ ಪಡೆದ ಪೊಲೀಸರು
ಮೃತ ದೇಹವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೆ ಜನ ಪರದಾಡಿದ್ದು, ಎರಡು ದಿನಗಳ ಬಳಿಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ 55 ವರ್ಷದ ಪ್ರಮೋದ್ ಎಂಬುವರ ಮೃತಪಟ್ಟಿದ್ದರು. ಬಹಳ ವರ್ಷಗಳ ನಂತರ ದೇವನೂರು ಕೆರೆ ತುಂಬಿ ಅಪಾರ ಪ್ರಮಾಣದ ನೀರು ಹಲವು ಕಡೆಯಿಂದ ಹರಿದು ಹೋಗುತ್ತಿದೆ. ಕೆಲವೆಡೆ ಬೆಳೆಗಳು ಸಹ ನಾಶಗೊಂಡಿದೆ. ಆದರೆ ವ್ಯವಸ್ಥೆ ಮಾತ್ರ ಕಳೆದ ಅನೇಕ ವರ್ಷಗಳಿಂದ ಹಾಗೆಯೇ ಉಳಿದಿದೆ.
ಸುರಿದ ಭಾರೀ ಮಳೆಯಿಂದಾಗಿ ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಯು ನೀರಿನಿಂದ ತುಂಬಿತ್ತು. ಇದರಿಂದಾಗಿ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೆ ಮಂಗಳವಾರ ಬೆಳಗ್ಗೆ ತನಕವೂ ಕಾದಿದ್ದಾರೆ. ಹಳ್ಳದಲ್ಲಿ ನೀರು ಹಾಗೂ ಹಳ್ಳಕ್ಕೆ ಹರಿದು ಬರುತ್ತಿದ್ದ ನೀರು ಹೆಚ್ಚಿದ್ದ ಕಾರಣ ಕೆಲ ಸಮಯ ಕಾದಿದ್ದಾರೆ, ಮಧ್ಯಾಹ್ನದ ಹೊತ್ತಿಗೆ ನೀರು ತುಸು ಕಡಿಮೆಯಾದ ಕಾರಣ ಕೂಡಲೆ ನೀರಿನಲ್ಲೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಶವ ಹೂಳಲು ಗುಂಡಿ ತೆಗೆಯಲು ಜೆಸಿಬಿ ಯಂತ್ರತರಿಸಿದರೆ ಅದು ಕೂಡ ಕೆಸರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡ ಪರಿಣಾಮ ಅದರ ಸಲುವಾಗಿಯೂ ಸ್ಥಳೀಯರು ಪರದಾಡಿದ್ದಾರೆ.
ಶವವನ್ನು ಹೂಳುವ ಸಲುವಾಗಿ ಮೂರ್ನಾಲ್ಕು ಕಡೆ ಗುಂಡಿ ತೆಗೆದರೂ ಕೂಡ ಗುಂಡಿಯಲ್ಲಿ ನೀರು ತುಂಬುತ್ತಿದ್ದ ಪರಿಣಾಮ ನಂತರ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆರೆದು ಅಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಗ್ರಾಮದ ಜನರಿಗೆ ಎದುರಾಗಿರುವ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಕಳೆದ 10 ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಜನಪ್ರತಿನಿಧಿಗಳ ಬಳಿ ಎಷ್ಟೇ ಮನವಿ ಮಾಡಿದರೂ, ಏನೇ ಹೇಳಿದರೂ ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂಬುದಾಗಿ ಜನರು ತೀವ್ರ ಆಕ್ರೋಶವನ್ನು ಹೊರಹಾಕಿದ್ದು, ಇನ್ನಾದರೂ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತಾಗಿ ಗಮನಹರಿಸಿ ಜನರ ಸಮಸ್ಯೆಗೆ ಸೂಕ್ತವಾದ ಸ್ಪಂದನೆ ನೀಡಿ ಸಮಸ್ಯೆಯನ್ನು ಪರಿಹರಿಸಬೇಕಿದೆ.





0 Comments